‘ನ್ಯಾಯದಾನದ ದೀಪ ಆರಿದರೆ ಕತ್ತಲು ಆವರಿಸಲಿದೆ': ನ್ಯಾಯಾಂಗದ ಕಾರ್ಯವೈಖರಿಯ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ

Update: 2021-03-19 18:36 GMT

ಬೆಂಗಳೂರು, ಮಾ. 19: ‘ಶಾಸಕಾಂಗ, ಜನಪ್ರತಿನಿಧಿಗಳ(ಶಾಸಕರ) ಕಾರ್ಯವೈಖರಿ'ಯ ಬಗ್ಗೆ ಕಟುಟೀಕೆ ಮಾಡುವ, ಕೆಲ ತೀರ್ಪುಗಳನ್ನು ನೀಡುವ ಮೂಲಕ ಜಿಜ್ಞಾಸೆ ಸೃಷ್ಟಿಸುವ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಬಗ್ಗೆ ವಿಧಾನಸಭೆಯಲ್ಲಿ ಕೆಲಕಾಲ ಗಂಭೀರ ಸ್ವರೂಪದ ಚರ್ಚೆ ನಡೆಯಿತು.

ಶುಕ್ರವಾರ ವಿಧಾನಸಭೆಯಲ್ಲಿ 2021-22ನೆ ಸಾಲಿನ ಆಯವ್ಯಯದ ಮೇಲೆ ಮಾತನಾಡುತ್ತಿದ್ದ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ‘ಶಾಸಕಾಂಗದ ಕಾರ್ಯನಿರ್ವಹಣೆ ಕುಸಿದ ಸಂದರ್ಭದಲ್ಲಿ ಕಾರ್ಯಾಂಗ ಹೊಣೆಗಾರಿಕೆ ಮರೆತರೆ ನ್ಯಾಯಾಂಗ ಕ್ರಿಯಾಶೀಲವಾಗುತ್ತದೆ. ನ್ಯಾಯಾಲಯದ ಕಡೆಗೆ ಸಾಮಾನ್ಯ ಜನ ನ್ಯಾಯಕ್ಕಾಗಿ ದೃಷ್ಟಿ ನೆಟ್ಟಿದ್ದಾರೆ. ಆದರೆ, ನ್ಯಾಯದಾನದ ದೀಪ ಆರಿ ಹೋಗುವ ಆತಂಕವಿದ್ದು, ಅಮಾವಾಸ್ಯೆ ಕತ್ತಲು ಆವರಿಸಲಿದೆ' ಎಂದು ಎಚ್ಚರಿಕೆಯನ್ನಿತ್ತರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, ‘ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯದಾನದ ವಿಳಂಬ ಪ್ರಶ್ನಿಸುವ ಹಕ್ಕು, ಸಲಹೆ-ಸೂಚನೆಗಳನ್ನು ನೀಡುವ ಅಧಿಕಾರ ಶಾಸನಸಭೆಗೆ ಇಲ್ಲವೇ?' ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಮೇಶ್ ಕುಮಾರ್, ‘ನ್ಯಾಯದಾನವನ್ನು ಪ್ರಶ್ನಿಸುವ ಅಧಿಕಾರ ನಮಗಿದೆ' ಎಂದು ಹೇಳಿದರು,

ಇದಕ್ಕೆ ಧ್ವನಿಗೂಡಿಸಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ‘ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷ ಕಳೆದಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಸ್ತಕ್ಷೇಪಕ್ಕೆ ಅವಕಾಶವೇ ಇಲ್ಲದೆ ಇರುವುದರಿಂದ ನ್ಯಾಯಾಂಗ ವ್ಯವಸ್ಥೆ ಪ್ರಬಲವಾಗಲು ಮುಖ್ಯ ಕಾರಣವಾಗಿದೆ' ಎಂದು ತಮ್ಮ ಚಿಂತನೆಗಳನ್ನು ಸದನದಲ್ಲಿ ಮಂಡಿಸಿದರು.

‘ಇತ್ತೀಚಿನ ದಿನಗಳಲ್ಲಿ ನ್ಯಾಯದಾನದ ವಿಳಂಬವನ್ನು ಪ್ರಶ್ನಿಸುವುದೇ ನ್ಯಾಯಾಂಗ ನಿಂದನೆ ಎಂದು ಹೇಳಲಾಗುತ್ತಿದೆ ಅಷ್ಟು ಮಾತ್ರವಲ್ಲದೆ, ಸ್ಪೀಕರ್ ಅವರ ಅಧಿಕಾರವನ್ನು ಪ್ರಶ್ನಿಸಲಾಗುತ್ತಿದೆ. ಮಾತ್ರವಲ್ಲ, ಸ್ಪೀಕರ್ ಸ್ಥಾನ ನ್ಯಾಯಾಂಗಕ್ಕಿಂತ ಕೆಳಗಿಳಿಸಲು ಅದು ಆಲೋಚನೆ ನಡೆಸಿದೆ. ಮುಂಬರುವ ದಿನಗಳಲ್ಲಿ ಶಾಸನಸಭೆ ಇಷ್ಟೇ ಮಾತನಾಡಬೇಕೆಂಬ ನಿರ್ಬಂಧ ಹೇರುವ ಸಾಧ್ಯತೆಗಳಿವೆ ಎಂದು ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಸಂವಿಧಾನಕ್ಕಿಂತ ದೊಡ್ಡವರೇ?: ‘ನ್ಯಾಯಾಧೀಶರನ್ನು ಸಂವಿಧಾನವೇ ನಿಯೋಜಿಸುತ್ತದೆ. ಹೀಗಾಗಿ ಸಂವಿಧಾನಕ್ಕಿಂತ ಯಾರೂ ದೊಡ್ಡವರಿಲ್ಲ. ನೌಕರರಲ್ಲದ ನ್ಯಾಯಾಧೀಶರು ಸಹಕಾರದ ಸಂಘದ ಸದಸ್ಯರಾಗಲು ಅಥವಾ ನಿವೇಶನ ಪಡೆಯಲು ಅವಕಾಶವಿಲ್ಲ. ಆದರೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟಿನ 84 ಮಂದಿ ಅನಧಿಕೃತವಾಗಿ ನ್ಯಾಯಾಧೀಶರು ನಿವೇಶನ ಪಡೆದಿದ್ದಾರೆ. ಈ ಸಂಬಂಧ ನಾನು ಸದನ ಸಮಿತಿ ಅಧ್ಯಕ್ಷನಾಗಿದ್ದ ವೇಳೆ ವರದಿ ನೀಡಿದರೂ, ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ನ್ಯಾಯಂಗ ವ್ಯವಸ್ಥೆ ತನ್ನ ಪಾವಿತ್ರ್ಯತೆ ಉಳಿಸಿಕೊಂಡಿದೆಯೇ?' ಎಂದು ಜೆಡಿಎಸ್‍ನ ಹಿರಿಯ ಸದಸ್ಯ ಎ.ಟಿ. ರಾಮಸ್ವಾಮಿ ಕೇಳಿದರು.

ವಿಶ್ವಾಸದ ಕೊರತೆ: ‘ಶಾಸಕಾಂಗ, ಕಾರ್ಯಾಂಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ಪ್ರಶ್ನಿಸಲಾಗುತ್ತದೆ. ಆದರೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಪ್ರಶ್ನೆ ಮಾಡಲು ಆಗುತ್ತಿಲ್ಲ. ನ್ಯಾಯಾಂಗ ವ್ಯವಸ್ಥೆ ಬಗ್ಗೆ ಜನರಿಗೆ ವಿಶೇಷವಾದ ಅಭಿಮಾನ ಮತ್ತು ಗೌರವವಿದೆ. ಆದರೆ, ಅಲ್ಲಿನ ಭ್ರಷ್ಟಾಚಾರದ ಕಾರಣ ಅವರು ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಹೀಗೆ ಮುಂದುವರಿದರೆ ಅರಾಜಕತೆ ಸೃಷ್ಟಿಯಾಗಲಿದೆ' ಎಂದು ಸಚಿವ ಜಗದೀಶ್ ಶೆಟ್ಟರ್ ಎಚ್ಚರಿಸಿದರು.

ಕಳ್ಳರಾಗುವ ಭಯವೇ: ‘ಶಾಸಕರೊಂದಿಗೆ ನ್ಯಾಯಾಧೀಶರು ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ನಿರಾಕರಿಸುತ್ತಾರೆ. ಆದರೆ, ನಾವು ಅವರಿಗೆ ಮೂಲಸೌಲಭ್ಯ ಕಲ್ಪಿಸುವುದು ಸೇರಿದಂತೆ ವೇತನ ನೀಡಲು ಒಪ್ಪಿಗೆ ನೀಡಬೇಕು. ನಾವು ಕಳ್ಳರು ನಮ್ಮೊಂದಿಗೆ ಅವರು(ನ್ಯಾಯಾಧೀಶರು) ವೇದಿಕೆ ಹಂಚಿಕೊಂಡರೆ ಅವರು ಕಳ್ಳರಾಗುವ ಭಯವೇ?' ಎಂದು ಶಾಸಕ ಅರಗ ಜ್ಞಾನೇಂದ್ರ ಪ್ರಶ್ನಿಸಿದರು.

‘ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸೇರಿದಂತೆ ಮೂರು ವ್ಯವಸ್ಥೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುವ ರೀತಿಯಲ್ಲಿ ಇರಬೇಕು. ಇಲ್ಲವಾದರೆ, ಭವಿಷ್ಯದಲ್ಲಿ ಜನತೆಗೆ ಆಘಾತವಾದಂತೆ ಆಗುತ್ತದೆ'

-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News