ಕಲ್ಯಾಣ ಕರ್ನಾಟಕದಲ್ಲಿ ಜ್ಯುವೆಲ್ಲರಿ ಪಾರ್ಕ್ ಪ್ರಾರಂಭ: ಸಚಿವ ಮುರುಗೇಶ್ ನಿರಾಣಿ

Update: 2021-03-20 16:51 GMT

ಬೆಂಗಳೂರು, ಮಾ. 20: ಹಿಂದುಳಿದ ಕಲ್ಯಾಣ ಕರ್ನಾಟಕವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಆಭರಣ ತಯಾರಿಕೆಯ ಘಟಕ(ಜ್ಯುವೆಲರಿ ಪಾರ್ಕ್)ವನ್ನು ಪ್ರಾರಂಭಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿಚ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಚಿನ್ನಾಭಣ ತಯಾರಿಕಾ ಸಂಘಟನೆಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಎರಡು ದಿನಗಳ ಹಿಂದೆಯಷ್ಟೇ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಸರಕಾರಿ ಒಡೆತನದ ಆಭರಣ ಮಳಿಗೆಗಳನ್ನು(ಜ್ಯುವೆಲ್ಲರಿ ಶಾಪ್) ತೆರೆಯಲು ತೀರ್ಮಾನಿಸಿದ ಬೆನ್ನಲ್ಲೇ, ಇಲಾಖೆ ಮತ್ತೊಂದು ಈ ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಎಂದರು.

ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕಲಬುರಗಿ ಇಲ್ಲವೇ ಬೀದರ್ ಜಿಲ್ಲೆಯಲ್ಲಿ ಸುಮಾರು 50ರಿಂದ 75 ಎಕರೆ ಜಮೀನಿನಲ್ಲಿ ಜ್ಯುವೆಲರಿ ಪಾರ್ಕ್ ನಿರ್ಮಿಸಲು ನಿರ್ಧರಿಸಲಾಯಿತು. ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಜ್ಯುವೆಲರಿ ಪಾರ್ಕ್ ಪ್ರಾರಂಭಿಸಲಿದ್ದು, ಗ್ರಾಹಕರು ಒಂದೇ ಸೂರಿನಡಿ ಆಭರಣಗಳನ್ನು ಖರೀದಿಸಲು ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.

ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ಹಾಗೂ ರೈಲ್ವೆ ಸಂಪರ್ಕ ಉತ್ತಮವಾಗಿದೆ. ದೇಶ-ವಿದೇಶಗಳಿಂದ ಬಂದು ಹೋಗುವವರಿಗೆ ಎಲ್ಲ ಸೌಲಭ್ಯಗಳಿವೆ. ಜೊತೆಗೆ ರಾಜ್ಯ ಸರಕಾರ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಿದೆ ಎಂದ ಅವರು, ಬೆಂಗಳೂರಿನ ಹೊರ ಭಾಗದಲ್ಲಿ ಜ್ಯುವೆಲರಿ ಪಾರ್ಕ್ ಪ್ರಾರಂಭಿಸುವುದಾದರೆ ತೆರಿಗೆ ವಿನಾಯಿತಿ ನೀಡಲು ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.

ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಹೆಸರು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ವಿಶ್ವದರ್ಜೆ ಆಭರಣ ತಯಾರಿಸಬೇಕು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನಾಭರಣಗಳನ್ನು ತಯಾರಿಸುವಂತೆ ಸಲಹೆ ಮಾಡಿದ ಅವರು, ಈಗಾಗಲೇ ತೀರ್ಮಾನಿಸಿರುವಂತೆ ರಾಜ್ಯದ ಐದು ಕಡೆ ಸರಕಾರಿ ಒಡೆತನದ ಜ್ಯುವೆಲರಿ ಮಳಿಗೆಗಳನ್ನು ತೆರೆಯಬೇಕೆಂಬ ಚಿಂತನೆ ಇದೆ. ಆದಷ್ಟು ಶೀಘ್ರ ಇದು ಕಾರ್ಯಾರಂಭಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

' ಅದಿರು'ಖಾಸಗಿಯವರಿಗೆ: ದೇಶದಲ್ಲೇ ಚಿನ್ನ ಉತ್ಪಾದನೆ ಮಾಡುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕದ ಹಟ್ಟಿ ಚಿನ್ನದ ಗಣಿಗಾರಿಕೆಯಲ್ಲಿ ಅದಿರು ತೆಗೆಯುವುದನ್ನು ಖಾಸಗಿಯವರಿಗೆ ನೀಡಲು ಚಿಂತನೆ ನಡೆದಿದೆ ಎಂದ ಅವರು, ಜಮೀನು, ಆಡಳಿತ ಮಂಡಳಿಯನ್ನು ಸರಕಾರವೇ ನೋಡಿಕೊಳ್ಳಲಿದೆ. ಈ ವರ್ಷಾಂತ್ಯಕ್ಕೆ 5 ಸಾವಿರ ಕೆಜಿ ಚಿನ್ನ ಉತ್ಪಾದನೆ ಮಾಡಬೇಕೆಂಬ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು.

ಭೂಮಿಯ ಆಳದಲ್ಲಿ ಅದಿರನ್ನು ತೆಗೆಯಲು ಖಾಸಗಿಯವರಿಗೆ ನೀಡಿದರೆ ಇದರ ನಿರ್ವಹಣೆ ಉತ್ತಮವಾಗಲಿದೆ. ಜೊತೆಗೆ ಉತ್ಪಾದನಾ ಸಾಮಥ್ರ್ಯವೂ ಹೆಚ್ಚಾಗಲಿದ್ದು, ಈಗಿರುವ ಕಾರ್ಮಿಕರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳಬಹುದು. ಸರಕಾರ ಹಾಗೂ ಖಾಸಗಿಯವರಿಗೂ ಇದರಿಂದ ಲಾಭ ಬರಲಿದೆ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News