ಭೂಮಿಗೆ ನೀರು ಹೇಗೆ ಬಂತು?

Update: 2021-03-20 19:30 GMT

ನಮ್ಮ ಭೂಮಿಯ ಶೇಕಡಾ 70ರಷ್ಟು ಭಾಗ ನೀರಿನಿಂದ ಆವೃತವಾಗಿದೆ. ಸೌರವ್ಯೆಹದಲ್ಲಿ ಭೂಮಿಯು ಸೂರ್ಯನಿಂದ ಸರಿಯಾದ ದೂರದಲ್ಲಿ ಇರುವುದರಿಂದ ನೀರು ಅಸ್ತಿತ್ವದಲ್ಲಿದೆ. ಭೂಮಿಯು ಸೂರ್ಯನಿಂದ ಇತ್ತ ಸಮೀಪವೂ ಅಲ್ಲದ, ಅತ್ತ ದೂರವೂ ಅಲ್ಲದ ಗೋಲ್ಡಿಲಾಕ್ ಅಂದರೆ ತುಂಬಾ ತಣ್ಣಗಿರದ ಅಥವಾ ಹೆಚ್ಚು ಬಿಸಿಯಾಗಿರದ ವಲಯದಲ್ಲಿದೆ. ಭೂಮಿಯ ಮೇಲೆ ನೀರು ಎಂಬ ದ್ರವ ಇರುವುದರಿಂದಲೇ ಜೀವಿಗಳ ಉಗಮ ಮತ್ತು ವಿಕಾಸಕ್ಕೆ ಕಾರಣವಾಗಿದೆ. ನೀರು ನಮ್ಮ ಭೂ ಗ್ರಹದ ಒಂದು ವಿಶಿಷ್ಟ ಲಕ್ಷಣವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಪ್ರಮುಖಪಾತ್ರ ವಹಿಸುತ್ತದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಯಾದಾಗಿನಿಂದ ಈಗಿನವರೆಗೂ ಜಲಚಕ್ರದ ಬಗ್ಗೆ ತಿಳಿದುಕೊಂಡಿದ್ದೇವೆ. ಸಮುದ್ರ ಹಾಗೂ ಸರೋವರಗಳ ನೀರು ಸೂರ್ಯನ ಶಾಖಕ್ಕೆ ಕಾದು ಆವಿಯಾಗಿ, ಆವಿ ಮೋಡವಾಗಿ, ಮೋಡದಿಂದ ಮಳೆ ಸುರಿದು ಸಮುದ್ರ ಸರೋವರ ಸೇರಿ, ಪುನಃ ಸರೋವರಗಳ ನೀರು ಆವಿಯಾಗುವ ಪ್ರಕ್ರಿಯೆಯನ್ನು ತುಂಬಾ ಅರ್ಥವತ್ತಾಗಿ ತಿಳಿದುಕೊಂಡಿದ್ದೇವೆ. ಹಾಗಾದರೆ ಭೂಮಿಗೆ ನೀರು ಎಲ್ಲಿಂದ ಬಂತು? ಹೇಗೆ ಬಂತು? ಎಂಬುದನ್ನು ಇನ್ನೂ ತಿಳಿದುಕೊಳ್ಳುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎನಿಸುತ್ತದೆ.

ನೀರು ಭೂಮಿಗೆ ಹೇಗೆ ಬಂತು ಎಂಬುದನ್ನು ತಿಳಿಯಲು ಭೂಮಿಯ ಆರಂಭಿಕ ರಚನೆಗಳನ್ನು ತಿಳಿದುಕೊಳ್ಳಬೇಕು. ನಮ್ಮ ಗ್ರಹದ ನೀರಿನ ಮೂಲವು ಬಿಗ್‌ಬ್ಯಾಂಗ್ ಕಾಲದ ಒಂದು ಸಂಕೀರ್ಣ ಕಥೆಯಾಗಿದೆ. ಭೂಮಿಗೆ ನೀರು ಹೇಗೆ ಬಂತು ಎಂಬುದಕ್ಕೆ ಅನೇಕ ಸಿದ್ಧಾಂತಗಳಿವೆ. ಮೊದಲನೇ ಸಿದ್ಧಾಂತದ ಪ್ರಕಾರ ಬಿಗ್‌ಬ್ಯಾಂಗ್ ನಂತರ ದೂರ ಸಿಡಿದ ಅನಿಲ ಮತ್ತು ಶಿಲೆ ಕಣಗಳ ರಾಶಿಯು ಒಟ್ಟಾಗಿ ತಿರುಗುತ್ತಾ ಗ್ರಹಗಳಾಗಿ ರೂಪುಗೊಂಡವು ಎಂಬುದು ಗೊತ್ತು. ಮೂಲ ಅನಿಲದ ರಾಶಿ ಕುಗ್ಗಿ, ಸಾಂದ್ರವಾಗಿ ಸೂರ್ಯ ರೂಪುಗೊಳ್ಳುತ್ತಿದ್ದ ಹಂತದಲ್ಲೇ ಅದರ ಹೊರ ಅಂಚಿನಲ್ಲಿ ವೃತ್ತಾಕಾರವಾಗಿ ಸುತ್ತುತ್ತಿದ್ದ ಕಾಯಗಳು ಗುರುತ್ವ ಬಲದ ಸೆಳೆತಕ್ಕೆ ಒಳಗಾಗಿ ಗ್ರಹಗಳಾಗಿ ರೂಪುಗೊಂಡವು. ಮೊದಲು ಬಿಸಿಬಿಸಿ ಅನಿಲದ ಮುದ್ದೆಯಾಗಿದ್ದ ಭೂಮಿ ಕ್ರಮೇಣ ತಣ್ಣಗಾಯಿತು. ಆಗ ಹೊರಮೈ ಹೆಪ್ಪುಗಟ್ಟಿ ಚಿಪ್ಪಿನಂತಾಯಿತು. ಭಾರ ಲೋಹವಾದ ಕಬ್ಬಿಣ ನಿಧಾನವಾಗಿ ಭೂಗರ್ಭಕ್ಕಿಳಿಯಿತು. ನಿಕ್ಕಲ್ ಜೊತೆಗೂಡಿ ಭೂಮಿಯ ತಿರುಳನ್ನು ರೂಪಿಸಿತು.

ಸುಮಾರು ನೂರು ಕೋಟಿ ವರ್ಷಗಳ ಕಾಲ ಗ್ರಹಾಂಶಗಳು ಭೂಮಿಯನ್ನು ಸತತವಾಗಿ ಸುತ್ತಾಡಿಸುತ್ತಿದ್ದವು. ಇದರ ಪರಿಣಾಮವಾಗಿ ಭೂಗ್ರಹ ಗಾತ್ರದಲ್ಲಿ ಹಿಗ್ಗಿತು. ಹಗುರ ಧಾತುಗಳಾದ ಅಲ್ಯೂಮಿನಿಯಮ್, ಸಿಲಿಕಾನ್ ಮುಂತಾದವು ಭೂಚಿಪ್ಪಿನಲ್ಲಿ ಸೇರಿದವು. ವಿಕಿರಣಪಟು ಖನಿಜಗಳು ನಿರಂತರವಾಗಿ ದಹಿಸಿದುದರಿಂದ ಭೂಗರ್ಭ ಕುಲುಮೆಯಂತಾಯಿತು. ಕ್ರಮೇಣವಾಗಿ ಅನಿಲಗಳು ಸೋರಿಹೋಗಿ ವಾತಾವರಣ ನಿರ್ಮಿಸಿದವು. ನೈಟ್ರೋಜನ್, ಕಾರ್ಬನ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಮಿಥೇನ್, ಅಮೋನಿಯಾ ಭೂಮಿಗೆ ಅನಿಲದ ಕವಚವನ್ನು ತೊಡಿಸಿದವು. ಇದೇ ವೇಳೆ ನೀರೂ ಉತ್ಪತ್ತಿಯಾಯಿತು. ವಾಯುಮಂಡಲದಲ್ಲಿ ಮಿಳಿತವಾಗಿದ್ದ ತೇವಾಂಶ ಸಾಂದ್ರಗೊಂಡು ಮಳೆಗರೆದಾಗ ನೈಸರ್ಗಿಕ ಜಲಚಕ್ರ ಪ್ರಾರಂಭವಾಯಿತು. ಹೀಗೆ ಭೂಮಿಯ ಮೇಲೆ ನೀರು ಬಂದಿತು ಎಂಬುದು ವಿಜ್ಞಾನಿಗಳ ಲೆಕ್ಕಾಚಾರ.

ಎರಡನೇ ಸಿದ್ಧಾಂತದ ಪ್ರಕಾರ ಭೂಮಿ ರೂಪುಗೊಂಡಾಗಲೇ ಸ್ವಲ್ಪನೀರು ಇತ್ತು. ಅದು ನಿಹಾರಿಕೆಗಳ ಅನಿಲ ಮತ್ತು ಧೂಳಿನಲ್ಲಿ ಮಂಜಿನ ರೂಪದಲ್ಲಿ ಇತ್ತು ಎಂದು ಹೇಳಲಾಗುತ್ತದೆ. ಇನ್ನೊಂದು ಸಿದ್ಧ್ದಾಂತದ ಪ್ರಕಾರ ಭೂಮಿಯು ರೂಪುಗೊಂಡಾಗ ಅದರಲ್ಲಿನ ಶಿಲೆಗಳಲ್ಲಿ ನೀರಿನಂಶ ಇತ್ತು. ಕ್ರಮೇಣವಾಗಿ ಶಾಖ ಹಾಗೂ ಇನ್ನಿತರ ಪ್ರಕ್ರಿಯೆಗಳಿಂದ ಶಿಲೆಗಳಲ್ಲಿನ ನೀರು ಆವಿಯಾಗಿ ಮೋಡವಾಗಿ, ಮೋಡದಿಂದ ಮಳೆಯ ರೂಪದಲ್ಲಿ ಭೂಮಿಯಲ್ಲಿ ಸಂಗ್ರಹವಾಗುತ್ತಾ ಮತ್ತು ವಿಸ್ತೃತವಾಗುತ್ತಾ ಸಾಗಿದೆ. ಉಲ್ಕೆಗಳಿಂದ ನೀರು ಭೂಮಿಗೆ ಬಂದಿದೆ ಎಂಬ ಮತ್ತೊಂದು ವಾದವೂ ಇದೆ. ನಮಗೆಲ್ಲಾ ತಿಳಿದಿರುವಂತೆ ನೀರು ಹೈಡ್ರೋಜನ್ ಮತ್ತು ಆಕ್ಸಿಜನ್‌ಗಳ ಸಂಯುಕ್ತ ವಸ್ತು. ಭೂಮಿ ರೂಪುಗೊಂಡ ಪ್ರಾರಂಭಿಕ ವರ್ಷಗಳಲ್ಲಿ ವಾತಾವರಣ ಇರಲಿಲ್ಲ. ಕ್ರಮೇಣವಾಗಿ ವಾತಾವರಣದಲ್ಲಿ ಜೀವ ರಸಾಯನಿಕ ಅನಿಲಗಳು ಸಂಚಯವಾದಂತೆ ಹೈಡ್ರೋಜನ್ ಮತ್ತು ಆಕ್ಸಿಜನ್‌ಗಳು ಜೊತೆಗೂಡಿ ನೀರು ಎಂಬ ಜೀವ ರಸಾಯನಿಕ ದ್ರವ ರೂಪುಗೊಂಡಿರಬಹುದು ಎಂದು ಲೆಕ್ಕಾಚಾರ ಹಾಕಬಹುದು.

ಹೀಗೆ ವೈವಿಧ್ಯಮಯ ಪ್ರಕ್ರಿಯೆಗಳಿಂದ ಸಾವಿರಾರು ವರ್ಷಗಳ ನಂತರ ಭೂಮಿಯಲ್ಲಿ ನೀರು ಸಂಗ್ರಹವಾಗುತ್ತಾ ಸಾಗಿದೆ. ಆದರೆ ಪ್ರಸ್ತುತ ನೀರಿನ ಸ್ಥಾನಮಾನ ಹಾಗೂ ಬಳಕೆಯ ವಿಧಾನಗಳಲ್ಲಿ ವೈಪರೀತ್ಯಗಳಾಗಿವೆ. ಭೂಮಂಡಲದ ಮುಕ್ಕಾಲು ಭಾಗ ನೀರಿದೆ. ಆದರೆ ಅದರಲ್ಲಿ ಶೇಕಡಾ 97.3ರಷ್ಟು ಸಮುದ್ರದ ನೀರು ಹಾಗೂ ಶೇಕಡಾ 2.7ರಷ್ಟು ಹಿಮನದಿ, ಸಿಹಿನೀರ ಸರೋವರಗಳು, ನದಿಗಳಲ್ಲಿದೆ. ಸಾಗರದಲ್ಲಿನ ನೀರು ಬಹುತೇಕವಾಗಿ ನಿರುಪಯುಕ್ತ ವಾಗಿದೆ. ಉಳಿದ ಶೇಕಡಾ 2.7ರಷ್ಟು ನೀರು ಅಸಮರ್ಪಕವಾಗಿ ಹಂಚಿಕೆಯಾಗಿರುವುದರಿಂದ ಎಲ್ಲರಿಗೂ ಸರಿಯಾದ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. ಅದಕ್ಕಾಗಿ ಜಲಯುದ್ಧಗಳು ಸಂಭವಿಸಲೂಬಹುದು ಎಂಬುವುದು ಅತಿಶಯೋಕ್ತಿಯೇನಲ್ಲ. ಆದರೆ ಈಗಿರುವ ಸಿಹಿನೀರಿನ ಪ್ರಮಾಣವನ್ನು ವೈಜ್ಞಾನಿಕವಾಗಿ ಬಳಸಿಕೊಂಡರೆ ಖಂಡಿತವಾಗಿಯೂ ಜಗತ್ತಿನ ಎಲ್ಲರಿಗೂ ಕುಡಿಯಲು ನೀರು ಲಭ್ಯವಾಗುತ್ತದೆ. ಅದಕ್ಕಾಗಿ ನಾವು ಜಲಸಂರಕ್ಷಣೆಯ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಅನಿವಾರ್ಯತೆ ಇದೆ. ಜಲಸಂರಕ್ಷಣೆಯ ಸೂತ್ರಗಳು ಕೇವಲ ಬೋಧನೆಗೆ ಮಾತ್ರ ಸೀಮಿತವಾಗದೆ ಜೀವನದ ಭಾಗವಾಗಬೇಕು. ಪ್ರತಿಯೊಬ್ಬರೂ ಆ ಸೂತ್ರಗಳನ್ನು ಅನುಸರಿಸಿ ನಡೆದರೆ ಭೂಗ್ರಹವನ್ನು ನೀಲಗ್ರಹವನ್ನಾಗಿ ಉಳಿಸಿಕೊಳ್ಳಬಹುದು. ಇಲ್ಲದಿದ್ದರೆ ಮುಂದೊಂದು ದಿನ ಇದೂ ಬರಡು ಗ್ರಹವಾಗಲೂಬಹುದು. ಹಾಗಾಗದಂತೆ ನೋಡಿಕೊಳ್ಳುವುದು ಎಲ್ಲರ ಹೊಣೆಯಾಗಿದೆ.

Writer - ಆರ್.ಬಿ.ಗುರುಬಸವರಾಜ

contributor

Editor - ಆರ್.ಬಿ.ಗುರುಬಸವರಾಜ

contributor

Similar News