ಭಾರತದ ಸಚಿವರ ಜತೆ ಮಾನವ ಹಕ್ಕುಗಳ ಕುರಿತು ಚರ್ಚೆ: ಅಮೆರಿಕ ರಕ್ಷಣಾ ಕಾರ್ಯದರ್ಶಿ

Update: 2021-03-21 05:46 GMT

ಹೊಸದಿಲ್ಲಿ, ಮಾ.20: ಭಾರತದಲ್ಲಿ ಅಲ್ಪಸಂಖ್ಯಾತರ ಮಾನವಹಕ್ಕು ವಿಷಯದ ಬಗ್ಗೆ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ . ಸಹಭಾಗಿಗಳ ಮಧ್ಯೆ ಈ ರೀತಿಯ ಮಾತುಕತೆ ಅತೀ ಮುಖ್ಯವಾಗಿದೆ ಎಂದು ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡೆ ಆಸ್ಟಿನ್ ಹೇಳಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ (ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತರ) ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜತೆ ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿಯೊಂದಿಗೆ ಆ ವಿಷಯ ಪ್ರಸ್ತಾಪಿಸಲು ನನಗೆ ಅವಕಾಶ ಸಿಗಲಿಲ್ಲ. ಆದರೆ ಸಂಪುಟದ ಇತರ ಸಚಿವರೊಂದಿಗೆ ಈ ವಿಷಯ ಚರ್ಚಿಸಿದ್ದೇನೆ ಎಂದರು. ಭಾರತ ನಮ್ಮ ಸಹಭಾಗಿ ದೇಶ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಸಹಭಾಗಿತ್ವವನ್ನು ನಾವು ಗೌರವಿಸುತ್ತೇವೆ ಮತ್ತು ಸಹಭಾಗಿಗಳ ಮಧ್ಯೆ ಇಂತಹ ವಿಷಯಗಳ ಚರ್ಚೆ ನಡೆಸಲು ಸಾಧ್ಯವಾಗಬೇಕು. ಚರ್ಚಿಸುವಾಗ ನಮಗೆ ಹಿತಕರ ಅನುಭವವಾಗಿದೆ ಮತ್ತು ಅತ್ಯಂತ ಅರ್ಥಪೂರ್ಣವಾಗಿ ಮಾತುಕತೆ ನಡೆಸಿ ಮುನ್ನಡೆ ಸಾಧಿಸಿದ್ದೇವೆ ಎಂದು ಆಸ್ಟಿನ್ ಹೇಳಿದ್ದಾರೆ.

ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆ ಶಿಥಿಲಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ಅಮೆರಿಕ ಸಂಸತ್‌ನ ವಿದೇಶಿ ಸಂಬಂಧ ಸಮಿತಿಯ ಅಧ್ಯಕ್ಷ ರಾಬರ್ಟ್ ಮೆನೆಂಡಸ್ ವ್ಯಕ್ತಪಡಿಸಿರುವ ಆತಂಕವನ್ನು ಭಾರತ ಸರಕಾರದೊಂದಿಗೆ ಪ್ರಸ್ತಾಪಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಾನವಹಕ್ಕು ಮತ್ತು ನ್ಯಾಯ ಪರಿಪಾಲನೆ ಅಮೆರಿಕಕ್ಕೆ ಮಹತ್ವದ್ದಾಗಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿರುವುದು ನಿಮಗೆ ತಿಳಿದಿದೆ. ನಮ್ಮ ಸಿದ್ಧಾಂತವನ್ನು ನಾವು ಯಾವತ್ತೂ ಪಾಲಿಸುತ್ತೇವೆ. ಒಂದು ಪ್ರಜಾಪ್ರಭುತ್ವ ದೇಶವಾಗಿ ಅದು ನಮಗೆ ಮುಖ್ಯವಾಗಿದೆ. ಭಾರತವೂ ಒಂದು ಪ್ರಜಾತಂತ್ರ ದೇಶವಾಗಿದ್ದು ನಿಮಗೂ ನಿಮ್ಮದೇ ಆದ ಸಿದ್ಧಾಂತವಿದೆ. ನಾವಿಬ್ಬರೂ ಜತೆಗೂಡಿ ಕಾರ್ಯನಿರ್ವಹಿಸುವ ಹಲವಾರು ವಿಷಯಗಳಿವೆ ಎಂದರು. ಈ ವಲಯದಲ್ಲಿ ಚೀನಾದ ಆಕ್ರಮಣಶೀಲತೆಯ ವಿರುದ್ಧವಿರುವ ದೇಶಗಳ ಒಕ್ಕೂಟವನ್ನು ರಚಿಸುವ ಪ್ರಯತ್ನದ ಅಂಗವಾಗಿ ಅಮೆರಿಕ ಅಧ್ಯಕ್ಷ ಬೈಡನ್ ಸರಕಾರದ ಉನ್ನತ ಅಧಿಕಾರಿಯೊಬ್ಬರು ಭಾರತಕ್ಕೆ ನೀಡಿರುವ ಪ್ರಪ್ರಥಮ ಭೇಟಿ ಇದಾಗಿದೆ. ಶುಕ್ರವಾರ ಅವರು ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದು ಶನಿವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರೊಂದಿಗೆ ಮಾತುಕತೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News