​ಹತ್ರಾಸ್ ಪ್ರಕರಣದ ತನಿಖೆ ವೇಳೆ ಸಾಕ್ಷಿ, ವಕೀಲರಿಗೆ ಬೆದರಿಕೆ ಆರೋಪ : ತನಿಖೆಗೆ ಆದೇಶ

Update: 2021-03-21 04:04 GMT

ಲಕ್ನೋ: ಹತ್ರಾಸ್‌ನಲ್ಲಿ ಅತ್ಯಾಚಾರಕ್ಕೆ ಒಳಗಾದ ದಲಿತ ಯುವತಿ ಸಾವಿಗೀಡಾದ ಪ್ರಕರಣದ ವಿಚಾರಣೆ ವೇಳೆ ಅಭಿಯೋಜನೆ ಸಾಕ್ಷಿ ಮತ್ತು ದಲಿತ ಯುವತಿಯ ವಕೀಲರಿಗೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಹತ್ರಾಸ್ ಜಿಲ್ಲಾ ನ್ಯಾಯಾಧೀಶರು ಮತ್ತು ಕೇಂದ್ರೀಯ ವಿಭಾಗದ ಸಿಆರ್‌ಪಿಎಫ್ ಮಹಾನಿರ್ದೇಶಕರಿಗೆ ಆದೇಶ ನೀಡಿದೆ.

ಮಾ.5ರಂದು ವಿಚಾರಣೆ ನಡೆಯುತ್ತಿದ್ದಾಗ ವಿಶೇಷ ನ್ಯಾಯಾಧೀಶರ ಎದುರೇ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ 15 ದಿನಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ವಿಚಾರಣೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಪ್ರಕರಣವನ್ನು ಹತ್ರಾಸ್‌ನಿಂದ ಹೊರಗೆ ಸ್ಥಳಾಂತರಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದೆ.

ನ್ಯಾಯಮೂರ್ತಿ ರಂಜನ್ ರಾಯ್ ಮತ್ತು ನ್ಯಾಯಮೂರ್ತಿ ಜಸ್‌ಪ್ರೀತ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಪ್ರಕರಣದ ತನಿಖೆ ಸುಗಮವಾಗಿ ಸಾಗುವ ನಿಟ್ಟಿನಲ್ಲಿ ನ್ಯಾಯಾಲಯದ ಆವರಣದಲ್ಲಿ ಮತ್ತು ಹೊರಗೆ ಸಾಧ್ಯವಿರುವ ಎಲ್ಲ ಭದ್ರತಾ ವ್ಯವಸ್ಥೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮತ್ತು ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿದೆ.

ಸಂತ್ರಸ್ತೆಯ ಕುಟುಂಬ ಮತ್ತು ಸಾಕ್ಷಿಗಳಿಗೆ ರಕ್ಷಣೆ ಮುಂದುವರಿಸುವಂತೆ ಸಿಆರ್‌ಪಿಎಫ್‌ಗೆ ಆದೇಶ ನೀಡಲಾಗಿದೆ. 19 ವರ್ಷದ ದಲಿತ ಯುವತಿಯ ಮೇಲೆ ನಾಲ್ಕು ಮಂದಿ ಕಳೆದ ಸೆಪ್ಟೆಂಬರ್ 14ರಂದು ಅತ್ಯಾಚಾರ ಎಸಗಿದ್ದರು ಎಂದು ಆಪಾದಿಸಲಾಗಿತ್ತು. ಚಿಕಿತ್ಸೆ ವೇಳೆ ಸೆ.29ರಂದು ದೆಹಲಿಯ ಸಪ್ಧರ್‌ಜಂಗ್ ಆಸ್ಪತ್ರೆಯಲ್ಲಿ ಸಂತ್ರಸ್ತೆ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News