ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಬಲಿಪಶು: ಬಿಜೆಪಿ ಶಾಸಕ ಯತ್ನಾಳ್

Update: 2021-03-21 12:35 GMT

ವಿಜಯಪುರ, ಮಾ. 21: ‘ಸಿಡಿ ಪ್ರಕರಣದ ಹಿಂದೆ ದೊಡ್ಡ ಗ್ಯಾಂಗ್ ಇದ್ದು, ಇದರಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೊಬ್ಬ ಬಲಿಪಶುವಷ್ಟೇ. ಇದರ ಹಿಂದೆ ಸಾಕಷ್ಟು ಜನರಿದ್ದಾರೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಒಂದು ಪಡೆಯೇ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ' ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ದೂರಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ರಾಜಕಾರಣಿಗಳು ಭಯದಲ್ಲಿದ್ದಾರೆ. ನನ್ನ ಸಿಡಿ ಇದೆ, ಬೇರೆಯವರ ಸಿಡಿ ಇದೆ ಎಂದು ಆತಂಕಪಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಾಜಕಾರಣಿಯೊಬ್ಬರು ಮಾಜಿ ಸಚಿವ, ಮಾಜಿ ಶಾಸಕರ ಸಿಡಿ ಇಟ್ಟುಕೊಂಡು ಆಟವಾಡಿಸುತ್ತಿದ್ದಾರೆ. ಮರ್ಯಾದೆ ತಗೆಯಬೇಡಿ ಎಂದು ಬೇಡಿಕೊಂಡರೂ ಸಿಡಿ ಬಿಡುಗಡೆ ಮಾಡಿ ಈಗ ಸಚಿವರಾಗಿದ್ದಾರೆ' ಎಂದು ಆರೋಪಿಸಿದರು.

10 ಕೋಟಿ ರೂ.: ಹಲವು ಮಂದಿಗೆ ವಂಚಿಸಿರುವ ಆರೋಪ ಹೊತ್ತಿರುವ ಯುವರಾಜ್ ಬಳಿ ರಾಜಕಾರಣಿಯೊಬ್ಬರು ಕಾಲು ಮುಗಿದು ರಾಜ್ಯಸಭೆ ಟಿಕೆಟ್‍ಗಾಗಿ 10 ಕೋಟಿ ರೂ.ನೀಡಿರುವ ವಿಷಯ ವಿಧಾನಸಭೆಯ ಮೊಗಸಾಲೆಯಲ್ಲಿ ಹರಿದಾಡುತ್ತಿದೆ. ಇನ್ನೂ ಹಲವರ ಸಿಡಿ ಇದೆ ಎನ್ನುವ ಸುದ್ದಿ ಹಬ್ಬಿದೆ. ಇದರಿಂದ ರಾಜಕಾರಣಗಳು ಅಂಜುವಂತಾಗಿದೆ ಎಂದರು.

ದುಡ್ಡು ಬರುವ ಖಾತೆ ಹೊಣೆ ಪುತ್ರನಿಗೆ: ಮುಖ್ಯಮಂತ್ರಿ ದುಡ್ಡು ಬರುವ ಖಾತೆಯ ಜವಾಬ್ದಾರಿಯನ್ನು ತನ್ನ ಪುತ್ರ ವಿಜಯೇಂದ್ರನಿಗೆ ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹಣ ಬರುವ ನಾಲ್ಕು ಪ್ರಮುಖ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಈ ಖಾತೆಗಳ ಜವಾಬ್ದಾರಿಯನ್ನು ಅವರ ಪುತ್ರ ವಿಜಯೇಂದ್ರ ಅವರಿಗೆ ಬಿಟ್ಟುಕೊಡುತ್ತಿದ್ದಾರೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.

ಜಿಲ್ಲಾಧಿಕಾರಿಗಳಿಂದ ಹಿಡಿದು ಎಲ್ಲ ರೀತಿಯ ವರ್ಗಾವಣೆಯನ್ನು ನಡೆಸುತ್ತಿದ್ದಾರೆ. ಹೀಗೆ ಚಿಕ್ಕಪುಟ್ಟ ವರ್ಗಾವಣೆಯನ್ನೂ ಸಿಎಂ ಮಾಡುತ್ತಿದ್ದರೆ, ಅಧಿಕಾರಿಗಳಿಗೆ ಏನು ಕೆಲಸವಿದೆ ಎಂದು ಹರಿಹಾಯ್ದ ಯತ್ನಾಳ್, ಉತ್ತಮ ಆಡಳಿತ ನೀಡುವ ಭರವಸೆ ನೀಡಿದ್ದ ಸರಕಾರ, ಹೀಗೆ ದುಡ್ಡು ಮಾಡುವ ಕೆಲಸ ಸರಿಯಲ್ಲ ಎಂದು ಆಕ್ಷೇಪಿಸಿದರು.

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಬಂಗಾಳ ಮತ್ತೊಂದು ಕಾಶ್ಮೀರ ಸಮಸ್ಯೆ ಎದುರಾಗಬಹುದು. ಮಮತಾ ಅಧಿಕಾರಾವಧಿಯಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಏಜೆಂಟರುಗಳು ಮತ್ತು ನುಸುಳುಕೋರರಿಗೆ ಅನುಕೂಲವಾಗಿತ್ತು. ಆದರೆ, ಮೋದಿ ನೇತ್ವತೃದಲ್ಲಿ ಅದನ್ನು ತಡೆದಿದ್ದಾರೆ ಎಂದು ಯತ್ನಾಳ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News