ಗಡುವಿಗೆ ಮೊದಲೇ 70,000 ಆಯುಷ್ಮಾನ್ ಭಾರತ ಆರೋಗ್ಯ ಕೇಂದ್ರಗಳ ಕಾರ್ಯಾರಂಭ: ಕೇಂದ್ರ ಸರಕಾರ

Update: 2021-03-21 14:33 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಮಾ.21: 70,000 ಆಯುಷ್ಮಾನ್ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರ (ಎಬಿ-ಎಚ್‌ಡಬ್ಲುಸಿ) ಗಳನ್ನು ನಿಗದಿತ ಮಾ.31ಕ್ಕೆ ಮೊದಲೇ ಕಾರ್ಯಾರಂಭಗೊಳಿಸುವ ಮೂಲಕ ಭಾರತವು ಸಾರ್ವತ್ರಿಕ ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ರವಿವಾರ ತಿಳಿಸಿದೆ.

 ಈವರೆಗೆ 41.35 ಕೋ.ಜನರು ಈ ಕೇಂದ್ರಗಳಲ್ಲಿ ಸೇವೆಗಳನ್ನು ಪಡೆದುಕೊಂಡಿದ್ದು,ಇವರಲ್ಲಿ ಸುಮಾರು ಶೇ.54ರಷ್ಟು ಮಹಿಳೆಯರು ಸೇರಿದ್ದಾರೆ ಎಂದು ಅದು ಹೇಳಿದೆ.

 ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸಲಾಗಿದೆ, ಇದಕ್ಕೆ ಕೇಂದ್ರ ಹಾಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವಿನ ಅತ್ಯುನ್ನತ ಸಮನ್ವಯ ಪ್ರಮುಖ ಕಾರಣವಾಗಿದೆ. ಇದು ಪರಿಣಾಮಕಾರಿ ವಿಕೇಂದ್ರೀಕರಣ ಮತ್ತು ಸಹಕಾರಿ ಒಕ್ಕೂಟವಾದ ಪ್ರಕ್ರಿಯೆಗೆ ಪುರಾವೆಯಾಗಿದೆ ಎಂದು ಸಚಿವಾಲಯವು ತಿಳಿಸಿದೆ.

2018ರಲ್ಲಿ ಎಬಿ-ಎಚ್‌ಡಬ್ಲ್ಯುಸಿಗಳ ಆರಂಭವು ಭಾರತದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಇತಿಹಾಸದಲ್ಲಿ ಹೊಸ ತಿರುವನ್ನು ನೀಡಿದ್ದ ಘಳಿಗೆಯಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿರುವ ಸಚಿವಾಲಯವು,ಡಿಸೆಂಬರ್ 2022ರ ವೇಳೆಗೆ ದೇಶದ ನಗರ ಮತ್ತು ಗ್ರಾಮೀಣ ಪ್ರದೇಶಗಳ 1,50,000 ಉಪ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆಯುಷ್ಮಾನ್ ಭಾರತ ಕೇಂದ್ರಗಳನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಲಾಗಿತ್ತು. ಈ ಕೇಂದ್ರಗಳು ಹಾಲಿ ನೀಡುತ್ತಿರುವ ಪ್ರಜನನ ಮತ್ತು ಮಕ್ಕಳ ಆರೋಗ್ಯ ಸೇವೆಗಳು,ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳಿಗೆ ಸಂಬಂಧಿಸಿದ ಸೇವೆಗಳ ಜೊತೆಗೆ ಕ್ರಮೇಣ ಮಾನಸಿಕ ಆರೋಗ್ಯ,ಇಎನ್‌ಟಿ, ನೇತ್ರ ಸಮಸ್ಯೆ, ಬಾಯಿಯ ಆರೋಗ್ಯ ಇತ್ಯಾದಿಗಳಿಗೂ ಚಿಕಿತ್ಸೆಯನ್ನು ಒದಗಿಸಲಿವೆ ಎಂದು ತಿಳಿಸಿದೆ.

ಈವರೆಗೆ ಎಬಿ-ಎಚ್‌ಡಬ್ಲುಸಿಗಳಲ್ಲಿ 9.1 ಕೋಟಿ ರಕ್ತದೊತ್ತಡ,7.4 ಕೋಟಿ ಮಧುಮೇಹ,4.7 ಕೋಟಿ ಬಾಯಿ ಕ್ಯಾನ್ಸರ್,2.4 ಕೋಟಿ ಸ್ತನ ಕ್ಯಾನ್ಸರ್ ಮತ್ತು 1.7 ಕೋಟಿ ಗರ್ಭಕೋಶ ಕ್ಯಾನ್ಸರ್ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಸಚಿವಾಲಯವು ಬೆಟ್ಟು ಮಾಡಿದೆ.

ಟೆಲಿ ಸಮಾಲೋಚನೆ ಈ ಆರೋಗ್ಯ ಕೇಂದ್ರಗಳ ಇನ್ನೊಂದು ಪ್ರಮುಖ ಸೇವೆಯಾಗಿದ್ದು,ಈವರೆಗೆ 9.45 ಲ.ಕ್ಕೂ ಅಧಿಕ ಟೆಲಿ ಸಮಾಲೋಚನೆಗಳನ್ನು ನಡೆಸಲಾಗಿದೆ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News