ಮಾ.23: ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಆಗ್ರಹಿಸಿ ಸುರೇಶ್‍ ಕುಮಾರ್ ನಿವಾಸದ ಬಳಿ ಧರಣಿ

Update: 2021-03-21 16:25 GMT

ಬೆಂಗಳೂರು, ಮಾ.21: 1995ರ ನಂತರದ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಾ.23ರಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನೆ ಮುಂದೆ ಪ್ರತಿಭಟಿಸಲು ನೊಂದಾಯಿತ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ (ರೂಪ್ಸ) ಮುಂದಾಗಿದೆ ಎಂದು ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿರುವ ಅನುದಾನ ರಹಿತ ಕನ್ನಡ ಮಾಧ್ಯಮದ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕೆಂದು ಆಗ್ರಹಿಸಿ ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ 13 ದಿನಗಳ ಕಾಲ ಧಾರವಾಡದ ಡಿಸಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು. ಆಗ ಸಚಿವ ಸಿ.ಸಿ.ಪಾಟೀಲ್ ಸರಕಾರದ ಪರವಾಗಿ ಲಿಖಿತ ಭರವಸೆ ನೀಡಿದ್ದರು. ಆದರೆ, 2021-22ರ ಮುಂಗಡ ಪತ್ರದಲ್ಲಿ ಈ ವಿಚಾರ ಪ್ರಸ್ತಾಪವಾಗದ ಕಾರಣ ಕನ್ನಡ ಮಾಧ್ಯಮದ ಶಾಲಾ ಶಿಕ್ಷಕರು ಆತ್ಮಹತ್ಯೆಯಂತಹ ದಾರಿ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಖಾಸಗಿ ಶಾಲಾ ಶಿಕ್ಷಕರ ಉಳಿವಿಗಾಗಿ ಪ್ರಾಥಮಿಕ ಶಾಲಾ ನೌಕರರ ಸಂಘ, ರೂಪ್ಸ ಕರ್ನಾಟಕ, ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಹಾಗೂ ವಿವಿಧ ಶಿಕ್ಷಕರ ಸಮನ್ವಯ ಸಮಿತಿಗಳು ಸೇರಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಕ್ಕೋತ್ತಾಯಗಳು:- 1995ರಿಂದ ಎಲ್ಲ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು.

-ಕಲ್ಯಾಣ ಕರ್ನಾಟಕ ಭಾಗದ 371ಜೆ ಅಡಿಯಲ್ಲಿರುವ ಹಣದಲ್ಲಿ ಆ ಭಾಗದ ಅನುದಾನರಹಿತ ಶಾಲೆಗಳ ಅಭಿವೃದ್ಧಿಗೆ ಖರ್ಚು ಮಾಡಬೇಕು.

-ಸರಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಖಾಸಗಿ ಶಾಲಾ ಶಿಕ್ಷಕರಿಗೂ ವಿಸ್ತರಿಸಬೇಕು.

-ಬೀದರ್ ಗಡಿಭಾಗದ 124 ಕನ್ನಡ ಮಾಧ್ಯಮ ಶಾಲೆಗಳ ಮುಚ್ಚುವ ನಿರ್ಧಾರವನ್ನು ಕೈಬಿಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News