ಮದುವೆ ದಿಬ್ಬಣಕ್ಕೆ ಹೋಗಿದ್ದ ಬಸ್ ಪಲ್ಟಿ: 30ಕ್ಕೂ ಹೆಚ್ಚು ಮಂದಿಗೆ ಗಾಯ

Update: 2021-03-21 17:40 GMT

ಮೈಸೂರು,ಮಾ.21: ಮದುವೆ ಅರತಕ್ಷತೆ ಮುಗಿಸಿ ವಾಪಸ್ ಊರಿಗೆ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದ ಬಳಿ ಶನಿವಾರ ರಾತ್ರಿ ನಡೆದಿದೆ.

ಕಂದೇಗಾಲದ ನಾಗೇಂದ್ರ ಮತ್ತು ಎಚ.ಡಿ.ಕೋಟೆ ತಾಲೂಕಿನ ಬೊಪ್ಪನಹಳ್ಳಿ ಗ್ರಾಮದ ನಾಗದೇವಿ ಅವರ ವಿವಾಹ ಸರಗೂರಿನ ಅಂಬೇಡ್ಕರ್ ಭವನದಲ್ಲಿ ನಡೆಯತ್ತಿತ್ತು. ಶನಿವಾರ ವಿವಾಹ ಅರತಕ್ಷತೆ ಮುಗಿಸಿಕೊಂಡು ವಾಪಸ್ ಊರಿಗೆ ಹಿಂದಿರುಗುವ ವೇಳೆ ಕಂದೇಗಾಲ ಗ್ರಾಮದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಬಿದ್ದಿದೆ. ಈ ಅಪಘಾತದಿಂದ 30ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ.

ಘಟನೆ ನಡೆದ ತಕ್ಷಣ ಚಾಲಕ ಪರಾರಿಯಾಗಿದ್ದು, ಗಾಯಗೊಂಡವರನ್ನು ತಕ್ಷಣ ಆಂಬುಲೆನ್ಸ್ ಮೂಲಕ ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News