ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಾ.26ಕ್ಕೆ 'ಕರ್ನಾಟಕ ಬಂದ್': ರೈತ ನಾಯಕರಿಂದ ಘೋಷಣೆ

Update: 2021-03-22 12:58 GMT

ಬೆಂಗಳೂರು, ಮಾ.22: ಕೇಂದ್ರ ಸರಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಾ.26ರಂದು ‘ಕರ್ನಾಟಕ ಬಂದ್’ ಚಳವಳಿಗೆ ಕರೆ ನೀಡಲಾಗಿದ್ದು, ನೂರಾರು ಸಂಘಟನೆಗಳು ಇದಕ್ಕೆ ಸಮ್ಮತಿ ನೀಡಿವೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ತಿಳಿಸಿದೆ.

ಸೋಮವಾರ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಬಳಿಕ ಮೈದಾನದಲ್ಲಿ ಜಮಾವಣೆಗೊಂಡು ಸಮಾವೇಶ ನಡೆಸಿದರು. ಈ ವೇಳೆ ಸಂಯುಕ್ತ ಕಿಸಾನ್ ಮೋರ್ಚಾ ನಾಯಕರಲ್ಲಿ ಪ್ರಮುಖರಾದ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ರೈತ ಮುಖಂಡರು ಕರ್ನಾಟಕ ಬಂದ್ ಘೋಷಿಸಿ, ಭಿತ್ತಿಪತ್ರ ಪ್ರದರ್ಶಿಸಿದರು.

ತದನಂತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಕೇಶ್ ಟಿಕಾಯತ್, ರೈತ ಸಂಕುಲಕ್ಕೆ ಮಾರಕವಾದ ಕೃಷಿ ಕಾಯ್ದೆಗಳ ವಿರುದ್ಧ ಎಲ್ಲ ರೈತರು ಸಂಘಟಿತವಾಗಿ ಹೋರಾಟ ಮಾಡಿದರೆ ಯಶಸ್ಸು ಸಿಗುತ್ತದೆ ಎಂದು ನಂಬಿದ್ದೆವು. ಅದಕ್ಕಾಗಿ ಎಲ್ಲ ರೈತ ಮುಖಂಡರೂ ಭಿನ್ನಾಭಿಪ್ರಾಯ ಮರೆತು ಒಂದೇ ವೇದಿಕೆಯಡಿ ಹೋರಾಟ ಆರಂಭಿಸಲು ನಿರ್ಧರಿಸಿದ್ದು, ಅದರಂತೆ ಹೋರಾಟದ ಹಾದಿ ಇಡೀ ದೇಶ ತಲುಪಿದೆ ಎಂದರು.

ಕೇಂದ್ರ ಸರಕಾರ ಎಲ್ಲ ಕ್ಷೇತ್ರದಲ್ಲೂ ನೂತನ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಬಡವರನ್ನು-ರೈತರನ್ನು ಶೋಷಿಸುತ್ತಿದೆ. ಕೇಂದ್ರ ಸರಕಾರದ ಎಲ್ಲ ಕಾನೂನು ಕಾಯ್ದೆಗಳು ಉಳ್ಳವರ ಹಾಗೂ ಬಂಡವಾಳಶಾಹಿಗಳ ಪರವಾಗಿಯೇ ಇದೆ. ಇದೇ ಕಾರಣಕ್ಕೆ ಕಳೆದ ನಾಲ್ಕು ತಿಂಗಳಿಂದ ರೈತರು ಹೊಸದಿಲ್ಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ ಎಂದರು.

ಯುವಜನತೆಗೆ ಸತ್ಯ ಏನೆಂಬುದು ಈಗ ಅರ್ಥವಾಗುತ್ತಿದೆ. ಹೀಗಾಗಿ ಯುವಜನ ರೊಚ್ಚಿಗೆದ್ದು ತಾವೇ ಆಯ್ಕೆ ಮಾಡಿದ ಕೇಂದ್ರ ಸರಕಾರವನ್ನು ಹಿಂಪಡೆಯುವುದರ ಒಳಗಾಗಿ ಕೇಂದ್ರ ಸರಕಾರವೇ ಎಚ್ಚೆತ್ತು, ಈ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಲಿ ಎಂದು ಟಿಕಾಯತ್ ಆಗ್ರಹಿಸಿದರು.

ವಿಧಾನಸೌಧದ ಮುಂದೆ ತರಕಾರಿ ಮಾರಾಟ: ರೈತರು ಎಪಿಎಂಸಿ ಮಾರುಕಟ್ಟೆ ಮಾತ್ರವಲ್ಲದೆ, ಹೊರಗಡೆಯೂ ತರಕಾರಿ ಇನ್ನಿತರೆ ವಸ್ತುಗಳನ್ನು ಮಾರಾಟ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಹಾಗಾಗಿ, ಕರ್ನಾಟಕದ ರೈತರು ನಾಳೆಯಿಂದಲೇ ವಿಧಾನಸೌಧ ಮುಂದೆ ತರಕಾರಿ ಮಾರಾಟ ಮಾಡಿ. ಯಾರಾದರೂ ಪ್ರಶ್ನಿಸಿದರೆ ಮೋದಿ ಹೇಳಿದ್ದಾರೆಂದು ಉತ್ತರಿಸಿ ಎಂದು ನುಡಿದರು.

ರೈತ ನಾಯಕ ಯುದ್ಧವೀರ್ ಸಿಂಗ್ ಮಾತನಾಡಿ, ಕರ್ನಾಟಕದಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಆದರೆ, ಈ ಹೆಣ್ಣು ಮಗಳು ಮಾಡಿದ ತಪ್ಪಾದರೂ ಏನು? ಸರಕಾರ, ಸರ್ವಾಧಿಕಾರಿಗಳ ವಿರುದ್ಧ ಧ್ವನಿಗೂಡಿಸಿದರೆ ಹತ್ಯೆಗೈಯುವ ಹಂತಕ್ಕೆ ಹೋಗುತ್ತಾರಾ? ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟೀಕೆಗಳೆಂದರೆ ಆಗುವುದಿಲ್ಲ. ಹೀಗಾಗಿಯೇ ಬೆಂಗಳೂರಿನ ದಿಶಾ ರವಿ ಅನ್ನು ಬಂಧಿಸಿದರು ಎಂದು ವಾಗ್ದಾಳಿ ನಡೆಸಿದರು.

ಚಿಂತಕ, ನಟ ಚೇತನ್ ಮಾತನಾಡಿ, ರಾಜ್ಯದ ಮೂರೂ ಪಕ್ಷಗಳಿಗೆ ಯಾವುದೇ ರೀತಿಯ ಬದ್ಧತೆ ಇಲ್ಲ. ಇವರ ಬಾವುಟಗಳು ಬದಲಾಗಿದೆ ಹೊರತು, ಭಾವನೆಗಳು ಎಲ್ಲವೂ ಒಂದೇ. ಕೃಷಿ ವಿರುದ್ಧ ಮಾತ್ರವಲ್ಲದೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿಗಾಗಿಯೂ ನಾವು ಹೋರಾಟ ಕೈಗೊಳ್ಳಬೇಕು. ಇದಕ್ಕೆ ಯುವಕರು, ಕಾರ್ಮಿಕರು, ಕಲಾವಿದರೂ ಸೇರಿದಂತೆ ಎಲ್ಲ ಬಗೆಯ ಜನರು ಕೈಜೋಡಿಸಬೇಕು ಎಂದು ಕರೆ ನೀಡಿದರು.

ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಕೋವಿಡ್‍ನಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಅನ್ನದಾತರು ಜೀವನ ನಡೆಸಲು ಕೂಡ ಕಷ್ಟಪಡುತ್ತಿದ್ದಾರೆ. ಕೇಂದ್ರ ಸರಕಾರ ಕೃಷಿ ಕಾಯ್ದೆ ಜಾರಿ ಮಾಡಿ ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿದೆ ಎಂದರು.

ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಭಾರತದ ತಳಹದಿಯೇ ಕೃಷಿಯಾಗಿದ್ದು, ಒಂದು ವೇಳೆ ಕೃಷಿ ನಾಶವಾದರೆ, ನಮ್ಮ ಜೀವನವೇ ಬೀದಿಪಾಲು ಆಗುತ್ತಿದೆ. ಹೀಗಾಗಿ, ಇದರ ವಿರುದ್ಧ ನಾವು ಹೋರಾಟ ಮಾಡಬೇಕು. ಈ ಕುರಿತು ಹಳ್ಳಿಗಾಡಿನಲ್ಲೂ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಸಮಾವೇಶದಲ್ಲಿ ರೈತರ ಮುಖಂಡರಾದ ಡಾ.ದರ್ಶನ್ ಪಾಲ್, ಕೋಡಿಹಳ್ಳಿ ಚಂದ್ರಶೇಖರ್, ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ, ಹೋರಾಟಗಾರ್ತಿ ವರಲಕ್ಷ್ಮೀ, ಚಾಮರಸ ಮಾಲಿ ಪಾಟೀಲ್, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ, ಚಿಂತಕ ನೂರ್ ಶ್ರೀಧರ್, ಡಾ.ಎಚ್.ವಿ.ವಾಸು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

‘ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತೇನೆ’

ಸಮಾವೇಶದಲ್ಲಿ ಪಾಲ್ಗೊಂಡ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಮನವಿ ಪತ್ರ ಸಲ್ಲಿಸಿದರು.

ಬಳಿಕ ಪ್ರತಿಕ್ರಿಯಿಸಿದ ಸಚಿವರು, ರೈತರ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರಕಾರ ಬದ್ಧವಾಗಿದ್ದು, ಈ ಕುರಿತು ರೈತರೊಂದಿಗೆ ಸಭೆ ನಡೆಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಸಚಿವರು ಬೈಗುಳ ಕೇಳುತ್ತಾರಾ ?

ಸಮಾವೇಶವನ್ನುದ್ದೇಶಿಸಿ ರಾಕೇಶ್ ಟಿಕಾಯತ್ ಅವರು ಮಾತನಾಡುತ್ತಿದ್ದ ವೇಳೆ ವೇದಿಕೆಯತ್ತ ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಜರಾದರು. ಇದನ್ನು ಕಂಡು ಟಿಕಾಯತ್ ಅವರು ಭಾಷಣ ಅರ್ಧಕ್ಕೆ ಮೊಟಕುಗೊಳಿಸಲು ಮುಂದಾಗುತ್ತಿದ್ದ ವೇಳೆ ರೈತನಾಯಕರೊಬ್ಬರು ನಿಮ್ಮ ಮಾತುಗಳನ್ನು ಮುಂದುವರಿಸಿ ಎಂದರು. ಆಗ, ಸರಕಾರವನ್ನು ಬೈಯ್ಯುವುದನ್ನು ಸಚಿವರು ಕೇಳುತ್ತಾರಾ ಎಂದು ಮುಗುಳ್ನಕ್ಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News