'ನರ್ಸಿಂಗ್' ಪರವಾನಿಗೆಯಲ್ಲಿ ಅವ್ಯವಹಾರ ಆರೋಪ: ಸಮಗ್ರ ತನಿಖೆಗೆ ಜಂಟಿ ಸದನ ಸಮಿತಿ ರಚನೆ- ಸಿಎಂ

Update: 2021-03-22 14:34 GMT

ಬೆಂಗಳೂರು, ಮಾ.22: ರಾಜ್ಯದ ನರ್ಸಿಂಗ್ ಕಾಲೇಜುಗಳು ಹಾಗೂ ಪ್ಯಾರಾ ಮೆಡಿಕಲ್ ಕಾಲೇಜುಗಳಿಗೆ ಪರವಾನಿಗೆ ನೀಡುವಲ್ಲಿ ಅವ್ಯವಹಾರ ನಡೆದಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಜಂಟಿ ಸದನ ಸಮಿತಿ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಪ್ರತಿಪಕ್ಷಗಳ ಸದಸ್ಯರು ಹೆಸರು ಹೇಳುವ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಿಂದಲೇ ತನಿಖೆ ಮಾಡಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ವಿಧಾನ ಪರಿಷತ್‍ನಲ್ಲಿ ಹೇಳಿದರು. ಆದರೆ, ಪ್ರತಿಪಕ್ಷದವರು ಇದಕ್ಕೆ ಒಪ್ಪದೆ ಜಂಟಿ ಸದನ ಸಮಿತಿ ರಚಿಸಬೇಕೆಂದು ಪಟ್ಟು ಹಿಡಿದರು. 2020-21ನೆ ಸಾಲಿನಲ್ಲಿ ನರ್ಸಿಂಗ್ ಕಾಲೇಜುಗಳಿಗೆ ಅನುಮತಿ ನೀಡುವ ವಿಷಯದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ತಪ್ಪೇ ಮಾಡದಿದ್ದಾಗ ಹೆದರುವ ಪ್ರಶ್ನೆಯೇ ಇಲ್ಲ. ಹೊಸದಾಗಿ ಅನುಮತಿ ನೀಡಿರುವುದು ಸೇರಿದಂತೆ ಇದುವರೆಗೂ ಅನುಮತಿ ನೀಡಿರುವ ಎಲ್ಲ ನರ್ಸಿಂಗ್ ಕಾಲೇಜುಗಳ ಕುರಿತು ತನಿಖೆಗೆ ಜಂಟಿ ಸದನ ಸಮಿತಿ ರಚನೆ ಮಾಡುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದರು.

2020-21ನೆ ಸಾಲಿನಲ್ಲಿ ನರ್ಸಿಂಗ್ ಕಾಲೇಜುಗಳಿಗೆ ಅನುಮತಿ ನೀಡಿರುವ ಸರಕಾರದ ಕ್ರಮವನ್ನು ಖಂಡಿಸಿ ಕಳೆದ ಗುರುವಾರದಿಂದ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ್ದರು. ಜೆಡಿಎಸ್ ಸದಸ್ಯರ ಬೇಡಿಕೆ ನ್ಯಾಯಯುತವಾಗಿದೆ. ಸದನ ಸಮಿತಿ ಮೂಲಕ ತನಿಖೆ ನಡೆಸುವಂತೆ ಕಾಂಗ್ರೆಸ್ ಸದಸ್ಯರೂ ಒತ್ತಾಯಿಸಿದ್ದರು. ಸೋಮವಾರ ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯರು ಬಾವಿಗಿಳಿದು ಧರಣಿಯನ್ನು ಮುಂದುವರಿಸಿ ಜಂಟಿ ಸದನ ಸಮಿತಿ ರಚನೆಗೆ ಒತ್ತಾಯಿಸಿದರು.

ಸರಕಾರ ನೀಡಿದ ಉತ್ತರದಿಂದ ಜೆಡಿಎಸ್ ಸದಸ್ಯರು ತೃಪ್ತರಾಗದೇ ಇದ್ದುದರಿಂದ ಸದನ ನಡೆಸುವುದು ಕಷ್ಟ ಎಂದು ಸಭಾಪತಿ ಕೆಲಕಾಲ ಮುಂದೂಡಿದರು. ಮತ್ತೆ ಸದನ ಆರಂಭವಾದಾಗ ಜೆಡಿಎಸ್ ಸದಸ್ಯರು ಪಟ್ಟು ಬಿಡದೆ ಮುಂದುವರಿಸಿದರು. ಈ ಹಂತದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿ ಜಂಟಿ ಸದನ ಸಮಿತಿ ತನಿಖೆ ನಡೆಸುವುದಾಗಿ ಪ್ರಕಟಿಸಿದರು.

ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್, ಜೆಡಿಎಸ್‍ನ ಮರಿತಿಬ್ಬೇಗೌಡ ಅವರು ಮುಖ್ಯಮಂತ್ರಿಗಳ ಕ್ರಮವನ್ನು ಸ್ವಾಗತಿಸಿ ವಿಧಾನ ಪರಿಷತ್ ಸದಸ್ಯರೆ ಜಂಟಿ ಸಮಿತಿ ಅಧ್ಯಕ್ಷರಾಗಲಿ ಎಂದರು.

ಇದಕ್ಕೂ ಮುನ್ನ ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯರ ಬೇಡಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಯಾವುದೇ ಕಾರಣಕ್ಕೂ ಸದನ ಸಮಿತಿ ರಚಿಸಲು ಸಾಧ್ಯವಿಲ್ಲ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸೋಣ. 3 ರಿಂದ 6 ತಿಂಗಳ ಒಳಗೆ ವರದಿ ನೀಡುವಂತೆ ಸೂಚಿಸೋಣ. ನಿವೃತ್ತ ನ್ಯಾಯಮೂರ್ತಿ ಯಾರಾಗಬೇಕು ಎನ್ನುವುದನ್ನು ನೀವೇ ಸೂಚಿಸಿ ಎಂದರು.

ಇದಕ್ಕೆ ಜೆಡಿಎಸ್ ಸದಸ್ಯರು ಒಪ್ಪದೆ ಸದನ ಸಮಿತಿ ಮೂಲಕವೇ ತನಿಖೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದರಿಂದ ಕಲಾಪವನ್ನು ಮುಂದೂಡಲಾಯಿತು. ಇದಕ್ಕೂ ಮುನ್ನ ಜೆಡಿಎಸ್‍ನ ಶ್ರೀಕಂಠೇಗೌಡ ಅವರು, ಹೊರ ರಾಜ್ಯದ ವಿದ್ಯಾರ್ಥಿಗಳು ಕೇವಲ ಪರೀಕ್ಷೆ ಬರೆದು ಪ್ರಮಾಣ ಪತ್ರ ಪಡೆದು ದೇಶ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಥ ತಪ್ಪುಗಳ ಕುರಿತು ಸದನ ಸಮಿತಿ ರಚನೆ ಮಾಡಿ ಎಂದರೆ ಒಪ್ಪದೆ ಸಬೂಬು ಹೇಳುವುದು ಸರಿಯಲ್ಲ ಎಂದರು.

ಜೆಡಿಎಸ್ ಸದಸ್ಯರ ಅಂತಿಮ ನಿಲುವು ಏನು ಎಂದು ಧರಣಿ ನಿರತ ಸದಸ್ಯರನ್ನು ಪ್ರಶ್ನಿಸಿದರು. ಅದಕ್ಕೆ ಜೆಡಿಎಸ್ ಸದಸ್ಯರು ಸದನ ಸಮಿತಿ ರಚಿಸುವಂತೆ ಬಿಗಿ ಪಟ್ಟುಹಿಡಿದಿದ್ದರು. ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರು, ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರನ್ನು ತಮ್ಮ ಕೊಠಡಿಗೆ ಮಾತುಕತೆಗೆ ಕರೆದು ಕೆಲ ಕಾಲ ಕಲಾಪ ಮುಂದೂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News