ಸಿಡಿಯಲ್ಲಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್: ಗೃಹ ಸಚಿವ ಬಸವರಾಜ ಬೊಮ್ಮಾಯಿ

Update: 2021-03-23 12:22 GMT

ಬೆಂಗಳೂರು, ಮಾ.23: ಪ್ರತಿಪಕ್ಷ ಕಾಂಗ್ರೆಸ್ ಅನಾವಶ್ಯಕವಾಗಿ ಸದನದ ಸಮಯವನ್ನು ಹಾಳು ಮಾಡುತ್ತಿದ್ದು, ಅವರು ಎತ್ತಿರುವ ಎಲ್ಲ ಪ್ರಶ್ನೆಗಳಿಗೆ ಸರಕಾರ ಸಮರ್ಪಕ ಉತ್ತರ ಕೊಟ್ಟಿದೆ. ತನಿಖೆ ನಡೆಯುತ್ತಿದೆ. ಇವರಿಗೆ ಸತ್ಯಾಸತ್ಯತೆ ಬೇಕಾಗಿಲ್ಲ. ಅಪರಾಧಿಗಳಿಗೆ ಶಿಕ್ಷೆ ಕೊಡುವುದು ಬೇಕಾಗಿಲ್ಲ. ಸಿಡಿಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಕಿಡಿಗಾರಿದರು.

ಮಂಗಳವಾರ ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ತಮ್ಮ ಧರಣಿಯನ್ನು ಮುಂದುವರೆಸಿದರು ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರದ್ದು ದ್ವಿಮುಖ ನೀತಿ. ಆಡಳಿತದಲ್ಲಿದ್ದಾಗ ಒಂದು, ವಿರೋಧ ಪಕ್ಷದಲ್ಲಿದ್ದಾಗ ಒಂದು ರೀತಿ ಮಾತನಾಡುತ್ತಾರೆ. 2016ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಎಚ್.ವೈ.ಮೇಟಿ ಪ್ರಕರಣದಲ್ಲಿ ಮಾಡಿರುವ ಆದೇಶ ದಾಖಲೆಗಳಲ್ಲಿದೆ ಎಂದರು.

ಮೇಟಿ ಪ್ರಕರಣದಲ್ಲಿ ವಿಚಾರಣೆಗೊಳಪಡಿಸಿ ವರದಿಯನ್ನು ಸರಕಾರಕ್ಕೆ ನೀಡುವುದು ಎಂದು ಆದೇಶಿಸಿದ್ದಾರೆ. ತನಿಖೆ ಮಾಡುವಂತೆ ತಿಳಿಸಿಲ್ಲ. ಈಗ ನಾವು ಎಸ್‍ಐಟಿಯವರಿಗೆ ವಿಚಾರಣೆ ಮಾಡಿ ಸರಕಾರಕ್ಕೆ ವರದಿ ನೀಡಿ ಎಂದಿರುವುದು ತಪ್ಪೇ? ಇವರು ಮಾಡಿದರೆ ಸರಿ, ನಾವು ಮಾಡಿದರೆ ತಪ್ಪು. ತನಿಖೆಯ ಪ್ರಕ್ರಿಯೆ ಮುಗಿಯುವ ಮುನ್ನವೇ ಆ ಪ್ರಕರಣದಲ್ಲಿ ಕ್ಲೀನ್‍ಚೀಟ್ ನೀಡಲಾಗಿತ್ತು ಎಂದು ಬೊಮ್ಮಾಯಿ ಆರೋಪಿಸಿದರು.

ಆನಂತರ, ತನಿಖೆಯ ಬಿ ರಿಪೋರ್ಟ್ ಹಾಕಿದ್ದಾರೆ. ನಮ್ಮ ವಿರುದ್ಧ ಆರೋಪ ಮಾಡಲು ಇವರಿಗೆ ಯಾವ ನೈತಿಕ ಹಕ್ಕಿದೆ. ಇವರಿಂದ ಪಾಠ ಕಲಿಯುವ ಅಗತ್ಯವಿಲ್ಲ. ಇವರೆಲ್ಲ ಆ ಮಹಿಳೆಯ ವಿರುದ್ಧ ನಿಂತಿದ್ದಾರೆ. ರಾಜ್ಯದ ಜನ ನೋಡುತ್ತಿದ್ದಾರೆ. ಇವರಿಗೆ ಜನತೆಯೆ ಧಿಕ್ಕಾರ ಹೇಳುತ್ತಿದ್ದಾರೆ ಎಂದು ಅವರು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News