ಕೈಗಾರಿಕಾ ನೀತಿ ವಿರುದ್ಧವಾಗಿ ನಡೆದುಕೊಂಡವರ ವಿರುದ್ಧ ಕ್ರಮ: ಜಗದೀಶ್ ಶೆಟ್ಟರ್

Update: 2021-03-23 12:55 GMT

ಬೆಂಗಳೂರು, ಮಾ.23: ಕೈಗಾರಿಕಾ ನೀತಿ ಜಾರಿ ಅನುಸಾರ ಶೇ.70ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಲಾಗುವುದು. ಈ ನೀತಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. 

ಮಂಗಳವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಎಂ.ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಡಿ ದರ್ಜೆ ಹುದ್ದೆಗಳಲ್ಲಿ ಶೇ.100ರಷ್ಟು ಸ್ಥಳೀಯರಿಗೆ ನೀಡಲಾಗುವುದು. ಒಟ್ಟಾರೆಯಾಗಿ ಶೇ.70ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ನೀಡಲಾಗುತ್ತದೆ. ಕೈಗಾರಿಕೆಗಳ ಸ್ಥಾಪನೆಗೆ ಜಮೀನು ನೀಡಿದ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡಲಾಗುವುದು. ಸ್ಥಳೀಯರಿಗೆ ಉದ್ಯೋಗ ನೀಡಲು ನಿರ್ಲಕ್ಷ್ಯ ವಹಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಎಸಿ ಕಚೇರಿಯಲ್ಲಿಯೇ ಕುಳಿತುಕೊಂಡು ತಾವು ಕಾರ್ಯನಿರ್ವಹಿಸುತ್ತಿಲ್ಲ. ಬದಲಾಗಿ, ರಾಜ್ಯದ ಜಿಲ್ಲೆಗಳಿಗೆ ಭೇಟಿ ನೀಡಿ ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಲ್ಲಿರುವ ಸಮಸ್ಯೆಗಳನ್ನು ಆಲಿಸಿ ಬಗೆ ಹರಿಸುತ್ತಿದ್ದೇನೆ. ಅಲ್ಲದೆ, ದೇಶದಲ್ಲಿಯೇ ಕರ್ನಾಟಕ ರಾಜ್ಯ ಕೈಗಾರಿಕೆ ಬೆಳವಣಿಗೆಯಲ್ಲಿ ಮೂರು ವರ್ಷಗಳಿಂದ 2 ಅಥವಾ 3 ಸ್ಥಾನದಲ್ಲಿ ಇದ್ದೇವೆ ಎಂದು ತಿಳಿಸಿದರು. 

ಬೆಂಗಳೂರು ನಗರದಲ್ಲಿ ಮಧ್ಯಮ ಕೈಗಾರಿಕೆಗಳು 1703 ಇದ್ದರೆ, ಬೆಂಗಳೂರು ಗ್ರಾಮಾಂತರದಲ್ಲಿ 265 ಇವೆ. ಬೆಂಗಳೂರು ಗ್ರಾಮಾಂತರದಲ್ಲಿ ಬೃಹತ್ ಕೈಗಾರಿಕೆಗಳು 368 ಇದ್ದರೆ, ಬೆಂಗಳೂರು ಗ್ರಾಮಾಂತರದಲ್ಲಿ 27 ಇವೆ. ಇದರಿಂದ, ಸಾವಿರಾರು ಜನರಿಗೆ ಉದ್ಯೋಗ ಲಭಿಸಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News