ಅಕ್ರಮ ಹಣ ವರ್ಗಾವಣೆ ಪ್ರಕರಣ: ವಿಚಾರಣೆಗೆ ಹಾಜರಾದ ಮೆಹಬೂಬಾ ಮುಫ್ತಿ

Update: 2021-03-25 19:55 GMT

ಶ್ರೀನಗರ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಗುರುವಾರ ಪಾಲ್ಗೊಂಡರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಮಾರ್ಚ್ 22ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಮೆಹಬೂಬಾ ಮುಫ್ತಿಗೆ ಸಮನ್ಸ್ ನೀಡಿತ್ತು. ಆದರೆ ಪೂರ್ವಬದ್ಧತೆಯಿಂದಾಗಿ ದಿಲ್ಲಿಯಲ್ಲಿ ನಡೆಯುವ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮಾರ್ಚ್ 25ರಂದು ದಿಲ್ಲಿಯ ಬದಲು ಶ್ರೀನಗರದಲ್ಲಿ ವಿಚಾರಣೆ ನಡೆಸಬೇಕು . ತನ್ನ ಮನೆಯಲ್ಲಿ ಅಥವಾ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಬೇಕು ಎಂದು ಮೆಹಬೂಬಾ ಮುಫ್ತಿ ಕೋರಿಕೆ ಸಲ್ಲಿಸಿದ್ದರು. ಇದಕ್ಕೆ ಸಮ್ಮತಿಸಿದ ಜಾರಿ ನಿರ್ದೇಶನಾಲಯ, ಮಾ.25ರಂದು ಶ್ರೀನಗರದಲ್ಲಿ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು.

ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್‌ಗೆ ತಡೆ ನೀಡುವಂತೆ ಕೋರಿ ಮೆಹಬೂಬಾ ಮುಫ್ತಿ ಸಲ್ಲಿಸಿದ್ದ ಅರ್ಜಿಯನ್ನು ಮಾರ್ಚ್ 19ರಂದು ದಿಲ್ಲಿ ಹೈಕೋರ್ಟ್ ತಿರಸ್ಕರಿಸಿತ್ತು. ಅಕ್ರಮ ಹಣ ವರ್ಗಾವಣೆ ಕಾಯ್ದೆಯ ಸೆಕ್ಷನ್ 50ರಡಿ ತನಗೆ ಸಮನ್ಸ್ ನೀಡಿರುವುದನ್ನು ಮೆಹಬೂಬಾ ಮುಫ್ತಿ ಪ್ರಶ್ನಿಸಿದ್ದರು. ಯಾವುದೇ ವ್ಯಕ್ತಿಗೆ ಸಮನ್ಸ್ ನೀಡಲು ಅಕ್ರಮ ಹಣ ವರ್ಗಾವಣೆ ಕಾಯ್ದೆಯ ಸೆಕ್ಷನ್ 50 ಅಧಿಕಾರ ನೀಡುತ್ತದೆ. ಸಮನ್ಸ್ ಪಡೆದ ವ್ಯಕ್ತಿಗಳು ತಮಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಬೇಕು ಮತ್ತು ಅಧಿಕಾರಿಗಳು ಕೇಳುವ ದಾಖಲೆ, ಪುರಾವೆಗಳನ್ನ ಒದಗಿಸಬೇಕು. ಇದಕ್ಕೆ ತಪ್ಪಿದಲ್ಲಿ ಅವರನ್ನು ಶಿಕ್ಷಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News