ಸಿಡಿ ಪ್ರಕರಣ: ಸಿಟ್ ತನಿಖಾಧಿಕಾರಿಗಳಿಂದ ಸತತ 4 ಗಂಟೆ ಜಾರಕಿಹೊಳಿ ವಿಚಾರಣೆ

Update: 2021-03-29 14:52 GMT

ಬೆಂಗಳೂರು, ಮಾ.29: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಸಿಟ್(ವಿಶೇಷ ತನಿಖಾ ದಳ) ತನಿಖಾಧಿಕಾರಿಗಳು ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದರು.

ನೋಟಿಸ್ ಜಾರಿಗೊಳಿಸಿದ್ದ ಹಿನ್ನೆಲೆ ಸೋಮವಾರ ಮಡಿವಾಳದ ತಾಂತ್ರಿಕ ವಿಭಾಗ ಕೇಂದ್ರಕ್ಕೆ ಆಗಮಿಸಿದ ರಮೇಶ್ ಜಾರಕಿಹೊಳಿ ಅವರನ್ನು ಇನ್‍ಸ್ಪೆಕ್ಟರ್ ನೇತೃತ್ವದ ತಂಡ ವಿಚಾರಣೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಕೆಲ ಪ್ರಶ್ನೆಗಳಿಗೆ ಅವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ ಎನ್ನಲಾಗಿದೆ.

4 ದಿನ ಸಮಯ?: ರಮೇಶ್ ಜಾರಕಿಹೊಳಿ ವಿರುದ್ಧ ಆರೋಪ ಕೇಳಿ ಬಂದ ನಂತರ ಅವರು ಮೂರನೆ ಬಾರಿಗೆ ಸಿಟ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಇನ್ನು, ವಿಚಾರಣೆ ತಂಡ ಕೇಳಿದ ಕೆಲ ಪ್ರಶ್ನೆಗಳಿಗೆ ಉತ್ತರಿಸಲು ನಾಲ್ಕು ದಿನ ಸಮಯ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು, ಈ ಕುರಿತು ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್ ಮಾತನಾಡಿ, ತನಿಖಾಧಿಕಾರಿಗಳು ಒಬ್ಬೊಬ್ಬರನ್ನೆ ಕರೆದು ವಿಚಾರಣೆ ನಡೆಸುತ್ತಿದ್ದಾರೆ. ಯುವತಿ ನೀಡಿದ ದೂರಿನ ಮೇರೆಗೆ ರಮೇಶ್ ಜಾರಕಿಹೊಳಿ ಅವರಿಗೆ ಸಿಟ್ ನೋಟಿಸ್ ನೀಡಿತ್ತು ಎಂದರು.

ಪೊಲೀಸರ ವಿಚಾರಣೆ ಬಳಿಕ ಮುಂದೆ ಸಂತ್ರಸ್ತೆ ಎಂದು ಹೇಳಿಕೊಂಡಿರುವ ಯುವತಿ ನ್ಯಾಯಾಧೀಶರ ಮುಂದೆ ಸಿಆರ್‍ಪಿಸಿ 164ರ ಪ್ರಕಾರ ಹೇಳಿಕೆ ದಾಖಲಿಸಬಹುದು. ಆದರೆ, ಪೊಲೀಸರ ಮುಂದೆ ಹಾಜರಾಗದೆಯೇ ಈ ರೀತಿ ನೇರವಾಗಿ ಕೋರ್ಟ್ ಮುಂದೆ ಹೇಳಿಕೆ ನೀಡಲು ಸಾಧ್ಯವಿಲ್ಲ. ಹೀಗೆ, ಮುಂದೆ ಪ್ರತಿಯೊಬ್ಬ ದೂರುದಾರರು ನೇರವಾಗಿ ಕೋರ್ಟ್ ಮುಂದೆ ಬಂದು ಹೇಳಿಕೆ ನೀಡಲು ಆರಂಭಿಸಿದರೆ ಕಾನೂನು ಪ್ರಕ್ರಿಯೆಗಳೇ ಬದಲಾಗಬಹುದು. ಇದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News