ನನ್ನದು ಶಾಂಡಿಲ್ಯ ಗೋತ್ರ...

Update: 2021-03-31 05:45 GMT

ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಪ್ರಚಾರ ಅಭಿಯಾನ ಮಂಗಳವಾರ ರಾತ್ರಿ ಕೊನೆಗೊಳ್ಳುತ್ತಿದ್ದಂತೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ "ನನ್ನದು ಶಾಂಡಿಲ್ಯ ಗೋತ್ರ'' ಎಂದು ಮತದಾರರಿಗೆ ಹೇಳಿ ನಂದಿಗ್ರಾಮ ರಣಕಣದಲ್ಲಿ ತಮ್ಮ ಕೊನೇ ಅಸ್ತ್ರ ಪ್ರಯೋಗಿಸಿದ್ದಾರೆ. ಬ್ರಾಹ್ಮಣರ ಎಂಟು ಉನ್ನತ ಗೋತ್ರಗಳಲ್ಲಿ ಶಾಂಡಿಲ್ಯ ಗೋತ್ರ ಒಂದಾಗಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

ಹಿಂದೆ ತಮ್ಮದೇ ಪಕ್ಷದ ನಾಯಕರಾಗಿದ್ದ ಹಾಗೂ ಈಗ ಬಿಜೆಪಿ ಸೇರಿ ತಮ್ಮ ಎದುರಾಳಿಯಾಗಿರುವ ಸುವೇಂದು ಅಧಿಕಾರಿಯನ್ನು ದೀದಿ ನಂದಿಗ್ರಾಮ ಚುನಾವಣಾ ಕಣದಲ್ಲಿ ಎದುರಿಸುತ್ತಿದ್ದಾರೆ. ಇದೇ ಕ್ಷೇತ್ರದಲ್ಲಿ ರ‍್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಮಮತಾ ತಮ್ಮ ದೇವಳಗಳ ಭೇಟಿಯನ್ನು ನೆನಪಿಸಿಕೊಂಡಿದ್ದಾರೆ.

"ನನ್ನ ಎರಡನೇ ಪ್ರಚಾರಾಭಿಯಾನದಲ್ಲಿ, ನಾನು ಒಂದು ದೇವಳಕ್ಕೆ ಭೇಟಿ ನೀಡಿದಾಗ ಅಲ್ಲಿನ ಅರ್ಚಕರು ನನ್ನ ಗೋತ್ರ ಕೇಳಿದರು. ಆಗ ನಾನು 'ಮಾ ಮಾತಿ ಮನುಷ್' ಎಂದು ಹೇಳಿದೆ,'' ಎಂದರಲ್ಲದೆ ನಂತರ ಮತದಾರರನ್ನುದ್ದೇಶಿಸಿ "ವಾಸ್ತವವಾಗಿ ನನ್ನದು ಶಾಂಡಿಲ್ಯ ಗೋತ್ರ,'' ಎಂದರು.

ಮಮತಾರ ಈ ಹೇಳಿಕೆ ಖಂಡಿಸಿದ ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಮಮತಾ ಹತಾಶೆಯಿಂದ ತಮ್ಮ ಗೋತ್ರದ ಬಗ್ಗೆ ಹೇಳಿಕೊಂಡಿದ್ದಾರೆ ಎಂದಿದ್ದಾರೆ. "ಇದು ನನ್ನ ಗೋತ್ರ ಎಂದು ಹೇಳುವ ಅಗತ್ಯವಿಲ್ಲ, ಅದನ್ನು ನಾನು ಬರೆಯುತ್ತೇನೆ. ಆದರೆ ಅವರು ಚುನಾವಣೆಯಲ್ಲಿ ಸೋಲುವ ಭಯದಿಂದ ಹೇಳುತ್ತಿದ್ದಾರೆ. ಮಮತಾ ಬ್ಯಾನರ್ಜಿಯವರೇ, ರೋಹಿಂಗ್ಯನ್ನರು ಹಾಗೂ ನುಸುಳುಕೋರರು ಕೂಡ ಶಾಂಡಿಲ್ಯ ಗೋತ್ರದವರೇ?  ಆಕೆಯ ಸೋಲು ಖಚಿತ,'' ಎಂದು ತಮ್ಮ ಟ್ವಿಟರ್ ಹೆಸರಿನಲ್ಲಿ ಶಾಂಡಿಲ್ಯ ಉಪನಾಮೆ ಬಳಸುವ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News