ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ: ಬೆಳಗಾವಿ ರೈತ ಮಹಾಪಂಚಾಯತ್‍ ನಲ್ಲಿ ರಾಕೇಶ್ ಟಿಕಾಯತ್ ಕರೆ

Update: 2021-03-31 17:43 GMT

ಬೆಂಗಳೂರು/ಬೆಳಗಾವಿ, ಮಾ. 31: ‘ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ತಿದ್ದುಪಡಿಯನ್ನು ವಿರೋಧಿಸಿ ನಾವು 20 ಸಾವಿರ ಟ್ರ್ಯಾಕ್ಟರ್ ಗಳೊಂದಿಗೆ ದಿಲ್ಲಿ ಮುತ್ತಿಗೆ ಹಾಕಿದ್ದೇವೆ. ನೀವು ರಾಜಧಾನಿ ಬೆಂಗಳೂರಿಗೆ ಹೋಗುವ ಅಗತ್ಯವಿಲ್ಲ. ನಿಮ್ಮ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ' ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಇಂದಿಲ್ಲಿ ಕರೆ ನೀಡಿದ್ದಾರೆ.

ಬುಧವಾರ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಏರ್ಪಡಿಸಿದ್ದ ರೈತ ಮಹಾ ಪಂಚಾಯತ್‍ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆಯುವವರೆಗೂ ದಿಲ್ಲಿಯಲ್ಲಿ ರೈತರ ಹೋರಾಟ ನಿಲ್ಲುವುದಿಲ್ಲ. ಕೇಂದ್ರ ಸರಕಾರ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳ ತಿದ್ದುಪಡಿಯನ್ನು ಹಿಂಪಡೆಯಲೇಬೇಕು ಎಂದು ಆಗ್ರಹಿಸಿದರು.

ಅನುಮತಿ ಏಕೆ ಬೇಕು: ರೈತರ ಆಂದೋಲನಕ್ಕೆ ಅನುಮತಿ ಏಕೆ ಬೇಕು. ನಾವು ದಿಲ್ಲಿಯಲ್ಲಿ ಅನುಮತಿ ಪಡೆದು ಹೋರಾಟ ಮಾಡುತ್ತಿಲ್ಲ. ಬದಲಿಗೆ ಅನುಮತಿ ಇಲ್ಲದೇ ನಾವು ಆಂದೋಲನ ನಡೆಸುತ್ತಿದ್ದೇವೆ. ರೈತರ ಮೇಲೆ ಅಶ್ರುವಾಯು ಪ್ರಯೋಗ ಆಗುವಂತೆ ಹೋರಾಟ ಮಾಡಬೇಕು. ಪೊಲೀಸರ ಬ್ಯಾರಿಕೇಡ್‍ಗಳನ್ನ ಮುರಿದು ಹೋರಾಟ ಮಾಡಬೇಕು. ಯಾವಾಗ ರೈತರ ಹೋರಾಟ ಉಗ್ರವಾಗುತ್ತದೆಯೋ ಆಗಲೇ ಸರಕಾರಗಳು ಎಚ್ಚೆತ್ತುಕೊಳ್ಳುತ್ತವೆ ಎಂದು ರಾಕೇಶ್ ಟಿಕಾಯತ್ ಹೇಳಿದರು.

2021 ರೈತ ಹೋರಾಟದ ವರ್ಷವಿದು. ಪಂಜಾಬ್ ಮುಖ್ಯಮಂತ್ರಿ ತಮ್ಮ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡುವ ಧೈರ್ಯ ಮಾಡಲ್ಲ. ಈ ಭೂಮಿ ಅನ್ನ ಬೆಳೆಯುವ ರೈತರದ್ದು ಎಂದು ಎಚ್ಚರಿಸಿದ ರಾಕೇಶ್ ಟಿಕಾಯತ್, ಕೇಂದ್ರ ಸರಕಾರ ಕೃಷಿ ತಿದ್ದುಪಡಿ ಮಸೂದೆ ಜಾರಿಗೆ ತರುವ ಮೊದಲೇ ಗೋದಾಮಗಳು ನಿರ್ಮಾಣ ಆಗಿವೆ. ದೇಶದಲ್ಲಿ ಕಂಪೆನಿಗಳ ಸರಕಾರ ಆಡಳಿತದಲ್ಲಿಯೇ ಹೊರತು ಇದು ಯಾವುದೇ ಪಕ್ಷದ ಸರಕಾರ ಅಲ್ಲ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಬಲ ಬೆಲೆ ಯೋಜನೆ (ಎಂಎಸ್‍ಪಿ) ಶಾಸನ ಬದ್ಧಗೊಳಿಸಬೇಕು. ಕೃಷಿ ಕ್ಷೇತ್ರದ ನಾಶಕ್ಕೆ ಮೂರೇ ಕಾಯ್ದೆಗಳಲ್ಲ ಇನ್ನೂ ಸಾಕಷ್ಟು ಕಾಯ್ದೆಗಳು ಬರಲಿವೆ. ದಿಲ್ಲಿ ಹೋರಾಟದ ಸೂತ್ರ ಬೇರೆ ಏನಿಲ್ಲ. ಒಂದು ಗ್ರಾಮ, ಒಂದು ಟ್ರ್ಯಾಕ್ಟರ್, 20 ಜನರು ಹೋರಾಟದಲ್ಲಿ ಭಾಗವಹಿಸಿದರೆ ಸಾಕು. ಇನ್ನು ಮುಂದೆ ರೈತ ಹೋರಾಟ ಸಂಘರ್ಷದ ಹಾದಿ ತುಳಿಯುವುದು ಅನಿವಾರ್ಯವಾಗಲಿದೆ ಎಂದು ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದರು.

ಕೇಂದ್ರ ಸರಕಾರ ಮೂರು ಕೃಷಿ ಮಸೂದೆ ಹಿಂಪಡೆಯಲು ಇನ್ನೂ ಕೆಲ ತಿಂಗಳ ಗಡುವು ನೀಡುತ್ತಿದ್ದೇವೆ. ತಿದ್ದುಪಡಿ ವಾಪಸ್ ಪಡೆಯದಿದ್ದರೆ ಮಳೆಗಾಲದಲ್ಲಿಯೂ ರೈತರ ಹೋರಾಟ ಮುಂದುವರಿಯಲಿದೆ.

-ರಾಕೇಶ್ ಸಿಂಗ್ ಟಿಕಾಯತ್, ರೈತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News