ಉಪವಾಸಕ್ಕೆ ಮುನ್ನವೇ 8 ಕೆಜಿ ತೂಕ ಕಳೆದುಕೊಂಡ ಅಲೆಕ್ಸಿ ನವಾಲ್ನಿ

Update: 2021-04-02 18:53 GMT

ಮಾಸ್ಕೋ (ರಶ್ಯ), ಎ. 2: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ತೀವ್ರ ಟೀಕಾಕಾರ ಹಾಗೂ ಪ್ರತಿಪಕ್ಷ ನಾಯಕ, ಜೈಲಿನಲ್ಲಿರುವ ಅಲೆಕ್ಸಿ ನವಾಲ್ನಿ ಉಪವಾಸ ಆರಂಭಿಸುವುದಕ್ಕೆ ಮುನ್ನವೇ 8 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಅವರ ತಂಡದ ಸದಸ್ಯರು ಗುರುವಾರ ಹೇಳಿದ್ದಾರೆ.

ಅದೇ ವೇಳೆ, ಪ್ರತಿಪಕ್ಷ ನಾಯಕನ ಹದಗೆಡುತ್ತಿರುವ ಆರೋಗ್ಯದ ಬಗ್ಗೆ ಅವರ ಮಿತ್ರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ನನ್ನ ಬೆನ್ನು ನೋವಿಗೆ ಮತ್ತು ಜೋಮು ಹಿಡಿದಿರುವ ಎರಡೂ ಕಾಲುಗಳಿಗೆ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿ ನವಾಲ್ನಿ ಬುಧವಾರದಿಂದ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದ್ದಾರೆ.

189 ಸೆಂಟಿ ಮೀಟರ್ ಎತ್ತರದ ನವಾಲ್ನಿ ಜೈಲಿಗೆ ಹೋಗುವಾಗ 93 ಕೆಜಿ ತೂಗುತ್ತಿದ್ದರು ಎಂದು ಅವರ ತಂಡವು ಫೇಸ್‌ಬುಕ್‌ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದೆ.

‘‘ಈಗ ಅವರ ತೂಕ 85 ಕೆಜಿ. ಅಂದರೆ ಉಪವಾಸ ಸತ್ಯಾಗ್ರಹ ಆರಂಭಿಸುವ ಮುನ್ನವೇ ಅವರು 8 ಕೆಜೆ ತೂಕ ಕಳೆದುಕೊಂಡಿದ್ದಾರೆ’’ ಎಂದು ಅವರ ತಂಡ ತಿಳಿಸಿದೆ.

ನಿದ್ದೆಯ ಕೊರತೆಯಿಂದಾಗಿ ಅವರು ತೂಕ ಕಳೆದುಕೊಂಡಿದ್ದಾರೆ ಎಂಬ ಅಭಿಪ್ರಾಯವನ್ನು ಅವರ ತಂಡದ ಸದಸ್ಯರು ವ್ಯಕ್ತಪಡಿಸಿದ್ದಾರೆ. ‘‘ಇದೊಂದು ರೀತಿಯ ಚಿತ್ರಹಿಂಸೆ’’ ಎಂಬುದಾಗಿ ನವಾಲ್ನಿ ಆರೋಪಿಸಿದ್ದಾರೆ.

‘‘ನವಾಲ್ನಿಯನ್ನು ಭೇಟಿಯಾಗಲು ಅವರು ಈಗಲೂ ವೈದ್ಯರಿಗೆ ಅವಕಾಶ ನೀಡುತ್ತಿಲ್ಲ’’ ಎಂದು ಅವರ ತಂಡ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News