ಪೊಲೀಸ್ ತರಬೇತಿಯಲ್ಲಿ ಕೊಡಗಿನ ಯುವಕನ ಸಾಧನೆ: ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ಪಡೆದ ಚಿಂತನ್

Update: 2021-04-03 12:52 GMT

ಮಡಿಕೇರಿ ಏ.2 : ಕರ್ನಾಟಕ ಪೊಲೀಸ್ ಅಕಾಡೆಮಿ ವತಿಯಿಂದ ಮೈಸೂರಿನಲ್ಲಿ ನಡೆದ 44ನೇ ತಂಡದ ಆರಕ್ಷಕ ಉಪ ನಿರೀಕ್ಷಕರು (ಸಿವಿಲ್ ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ರಕ್ಷಣಾ ಪಡೆ) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ಕೊಡಗು ಮೂಲದ ಚಿಂತನ್ ಕೆ. ಆರ್(ಪ್ರೊಬೆಷನರಿ ಪಿಎಸ್‍ಐ) ಅವರು ತರಬೇತಿ ಅವಧಿಯಲ್ಲಿ ನೀಡುವ 'ಸರ್ವೋತ್ತಮ ಪ್ರಶಿಕ್ಷಣಾರ್ಥಿ'ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಮುಖ್ಯಮಂತ್ರಿಗಳ ಟ್ರೋಫಿ, ಗೃಹಮಂತ್ರಿಗಳ ಖಡ್ಗ, ಡಿಜಿ ಐಜಿಪಿ ರವರ ಬೇಟನ್, ಮತ್ತು ನಿವೃತ್ತ ಡಿಜಿಪಿ ಗರುಡಾಚಾರ್ ಅವರ 10 ಸಾವಿರ ನಗದು ಬಹುಮಾನ ಅವರು ತಮ್ಮದಾಗಿಸಿಕೊಂಡಿದ್ದಾರೆ. ಇದರ ಜೊತೆಗೆ ಬೆಸ್ಟ್ ಇನ್ ರಿವಾಲ್ವರ್ ಫೈರಿಂಗ್ ಟ್ರೋಫಿ ಕೂಡ ಪಡೆದುಕೊಂಡಿದ್ದಾರೆ. 

ಇವರ ಈ ಸಾಧನೆ ಜೊತೆಗೆ ಚಿಂತನ್, ಶನಿವಾರ ನಡೆದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದ ನಾಯಕತ್ವವನ್ನು ವಹಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಟ್ಟು ಕೊಡಗಿಗೆ ಕೀರ್ತಿ ತಂದಿದ್ದಾರೆ. 

ಕಾರ್ಯಕ್ರಮದಲ್ಲಿ ತರಬೇತಿ ವಿಭಾಗದ ಡಿಜಿಪಿ ಪದಮ್ ಕುಮಾರ್ ಗರ್ಗ್ ಪ್ರಶಸ್ತಿ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕರಾದ ವಿಪುಲ್ ಕುಮಾರ್, ಉಪ ನಿರ್ದೇಶಕಿ ಡಾ. ಸುಮನ್ ಡಿ ಪೆನ್ನೇಕರ್ ಮತ್ತಿತರರು ಉಪಸ್ಥಿತರಿದ್ದರು. 

ಚಿಂತನ್ ಅವರು ಕೊಡಗಿನ ಮೂರ್ನಾಡುವಿನ ಕೋಡಂಬೂರು ನಿವಾಸಿ ನಿವೃತ್ತ ಎಎಸ್‍ಐ ರಮೇಶ್ ಕೆ.ಯು ಹಾಗೂ ಜಾಹ್ನವಿ ದಂಪತಿಯ ಪುತ್ರರಾಗಿದ್ದಾರೆ. ಖಾಸಗಿ ಕಂಪೆನಿಯಲ್ಲಿ 4 ವರ್ಷ ಸೇವೆ ಮಾಡಿದ್ದು, ಹಾಕಿ ಕ್ರೀಡೆಯಲ್ಲೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ್ದಾರೆ. ಇದೀಗ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಿಎಸ್‍ಐ(ಸಿವಿಲ್) ಆಗಿ ನೇಮಕಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News