ಎ.20 ರವರೆಗೆ ಕೊಡಗಿನ ಪ್ರವಾಸಿ ತಾಣಗಳು ಬಂದ್

Update: 2021-04-03 16:07 GMT

ಮಡಿಕೇರಿ ಏ.3 : ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಏಪ್ರಿಲ್ 20ರ ವರೆಗೆ ಕೊಡಗು ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗುತ್ತಿದೆ. ಎಲ್ಲಾ ಪ್ರವಾಸಿ ತಾಣಗಳಿಗೂ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ. ಈ ಆದೇಶ ಉಲ್ಲಂಘನೆ ಶಿಕ್ಷಾರ್ಹವಾಗಿರುತ್ತದೆ ಎಂದೂ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಪ್ರಕಟಣೆಯ ಮೂಲಕ ಎಚ್ಚರಿಸಿದ್ದಾರೆ.

ಬೇಸಿಗೆಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಕೊಡಗು ಜಿಲ್ಲೆಗೆ ಆಗಮಿಸುವುದು ಸಾಮಾನ್ಯವಾಗಿದ್ದರೂ ಕೂಡ ಕೋವಿಡ್ ಸೋಂಕು ಕೂಡ ವ್ಯಾಪಕವಾಗಿ ಹರಡುತ್ತಿದೆ. ಮಾತ್ರವಲ್ಲದೇ, ಪ್ರವಾಸಿ ತಾಣಗಳಲ್ಲಿ ಮೋಜು ಮಸ್ತಿಯ ಹೆಸರಲ್ಲಿ ಕೋವಿಡ್ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗುತ್ತಿದ್ದು, ಕಡಿವಾಣ ಹಾಕುವುದೇ ದೊಡ್ಡ ಸವಾಲಾಗಿಯೂ ಪರಿಣಮಿಸುತ್ತಿದೆ. 

ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳಾದ ದುಬಾರೆ, ಕಾವೇರಿ ನಿಸರ್ಗ ಧಾಮ, ಮಡಿಕೇರಿಯ ರಾಜಾಸೀಟು, ಮಾಂದಲ್ ಪಟ್ಟಿ, ಅಬ್ಬಿಫಾಲ್ಸ್, ಕೋಟೆ ಅಬ್ಬಿ, ಸೋಮವಾರಪೇಟೆಯ ಮಲ್ಲಳ್ಳಿ ಜಲಪಾತ, ಇರ್ಪು, ಚೇಲಾವರ ಸೇರಿದಂತೆ ಮತ್ತಿತ್ತರ ಕಡೆಗಳಲ್ಲಿ ಪ್ರವಾಸಿ ಚಟುವಟಿಕೆ ತಾತ್ಕಾಲಿಕವಾಗಿ ಬಂದ್ ಆಗಲಿದೆ. 

ಸತತ ಪ್ರಾಕೃತಿಕ ವಿಕೋಪ, ಲಾಕ್ ಡೌನ್, ಕೋವಿಡ್ ಸೋಂಕು ಮತ್ತಿತ್ತರ ಕಾರಣಗಳಿಂದ ನೆಲಕಚ್ಚಿದ್ದ ಕೊಡಗು ಪ್ರವಾಸೋದ್ಯಮ ಕೆಲ ತಿಂಗಳ ಹಿಂದೆ ಚೇತರಿಕೆಯ ಹಾದಿ ತುಳಿದಿತ್ತಾದರೂ ಇದೀಗ ಮತ್ತೆ ಪ್ರವಾಸಿ ಕೇಂದ್ರಗಳು ಬಂದ್ ಆಗುತ್ತಿರುವುದು ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಬದುಕು ಕಟ್ಟಿಕೊಂಡವರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News