ಸ್ಟಾಲಿನ್ ಪುತ್ರಿಯ ಮನೆಗೆ ದಾಳಿ ನಡೆಸಿದ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದು 1.36 ಲಕ್ಷ ರೂ.

Update: 2021-04-03 18:34 GMT

ಚೆನ್ನೈ, ಎ.3: ಡಿ.ಎಂ.ಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಅವರ ಪುತ್ರಿ ಮತ್ತು ಅಳಿಯನ ಮನೆಗೆ ಶುಕ್ರವಾರ ದಾಳಿ ನಡೆಸಿ ಶೋಧ ನಡೆಸಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕೇವಲ 1.36 ಲಕ್ಷ ರೂ. ನಗದು ಪತ್ತೆಮಾಡಿದ್ದಾರೆ. ಸೂಕ್ತ ದಾಖಲೆಯನ್ನು ಮನೆಯವರು ಒದಗಿಸಿದ ಬಳಿಕ ಈ ಹಣವನ್ನು ಅಧಿಕಾರಿಗಳು ಮರಳಿಸಿದ್ದಾರೆ ಎಂದು ವರದಿಯಾಗಿದೆ.

ಮುಂದಿನ ವಾರ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ನೀಡಲು ಅಕ್ರಮ ಹಣ ಸಂಗ್ರಹಿಸಲಾಗಿದೆ ಎಂಬ ಮಾಹಿತಿಯನ್ನು ಆಧರಿಸಿ ರಾಜ್ಯದಲ್ಲಿ ಶುಕ್ರವಾರ 28 ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಇದರಲ್ಲಿ ನಾಲ್ಕು ಮನೆಗಳು ಸ್ಟಾಲಿನ್ ಪುತ್ರಿ ಮತ್ತು ಅಳಿಯನಿಗೆ ಸೇರಿದ್ದು ಇಲ್ಲಿ 1.36 ಲಕ್ಷ ರೂ. ಹಣ ಹೊರತುಪಡಿಸಿ ಇತರ ಯಾವುದೇ ಆಸ್ತಿ/ನಗದು ಜಫ್ತಿ ಮಾಡಿಲ್ಲ ಎಂದು ವರದಿ ತಿಳಿಸಿದೆ.

 ಶುಕ್ರವಾರ ಬೆಳಿಗ್ಗೆ ಆದಾಯ ತೆರಿಗೆ ಇಲಾಖೆಯ 25 ಅಧಿಕಾರಿಗಳು ಸ್ಟಾಲಿನ್ ಅಳಿಯ ಸಬರೀಶನ್ ಅವರಿಗೆ ಸೇರಿರುವ 4 ಮನೆ, ಸಬರೀಶನ್ ಸಹವರ್ತಿಗಳಾದ ಬಾಲಾ ಮತ್ತು ಕಾರ್ತಿಕ್‌ರ ಮನೆ, ಮಾಜಿ ಸಚಿವ ಸೆಂಥಿಲ್ ಬಾಲಾಜಿ ಮತ್ತವರ ಸಹೋದರ , ಸಂಸದ ಅಣ್ಣಾದುರೈ ಮನೆ, ಡಿಎಂಕೆ ಶಾಸಕ ಮುರಸೋಳಿ ಮನೆ ಸೇರಿದಂತೆ 28 ಕಡೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಚುನಾವಣೆಯ ಸಂದರ್ಭ ನಡೆದಿರುವ ಈ ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಖಂಡಿಸಿದ್ದು, ಇದಕ್ಕೆ ರಾಜ್ಯದ ಜನತೆ ಎಪ್ರಿಲ್ 6ರಂದು ಸ್ಪಷ್ಟ ತೀರ್ಪು ನೀಡಲಿದ್ದಾರೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News