ಎ. 7ರವರೆಗೂ ಥಿಯೇಟರ್ ಹೌಸ್ ಫುಲ್ ಗೆ ಅವಕಾಶ

Update: 2021-04-04 10:04 GMT

ಬೆಂಗಳೂರು: ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾದ ಕಾರಣ ರಾಜ್ಯ ಸರಕಾರ ಕಠಿಣ ಮಾರ್ಗದರ್ಶಿ ಬಿಡುಗಡೆಗೊಳಿಸಿತ್ತು. ಥಿಯೇಟರ್ನಲ್ಲಿ ಕೇವಲ ಶೇ. 50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿತ್ತು. ಸರಕಾರದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಸಿನಿಮಾ ರಂಗಕ್ಕೆ ಕೊನೆಗೂ ಜಯ ಸಿಕ್ಕಿದೆ. ಸರಕಾರ ಕೈಗೊಂಡ ಕಠಿಣ ನಿರ್ಧಾರವನ್ನು ಎಪ್ರಿಲ್ 7ರ ವರೆಗೆ ಸಡಿಲಿಸುವುದಾಗಿ ತಿಳಿಸಿದೆ.

ಫಿಲ್ಮ್ ಚೇಂಬರ್ ಮನವಿಗೆ ಸ್ಪಂದಿಸಿದ ರಾಜ್ಯ ಸರಕಾರ, ಎಪ್ರಿಲ್ 7ರವರೆಗೂ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದೆ. ಎಪ್ರಿಲ್ 7ರ ನಂತರ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿದೆ. ಈ ಮೂಲಕ ಸದ್ಯದ ನಿರ್ಧಾರ ಕೆಲವು ದಿನಗಳವರೆಗೆ ಸಡಿಲಿಕೆಯಾದಂತಾಗಿದೆ.

ಪುನೀತ್ ಮನವಿಗೆ ಸಿಎಂ ಪುರಸ್ಕಾರ: ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಭರ್ತಿಗಷ್ಟೇ ಅವಕಾಶ ಹಿನ್ನೆಲೆಯಲ್ಲಿ, ನಟ ಪುನೀತ್ ರಾಜ್ಕುಮಾರ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿಯಾಗಿದ್ದರು. ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ನೀಡುವಂತೆ ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದರು. ತಜ್ಞರ ಜೊತೆ ಚರ್ಚಿಸಿ ಪರಿಶೀಲಿಸುವುದಾಗಿ ಸಿಎಂ ಭರವಸೆ ನೀಡಿದ್ದರು. ಆ ಬಳಿಕ, ಮೂರು ದಿನಗಳ ಕಾಲ ಶೇ. 100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ.

ಪುನೀತ್ ಭೇಟಿ ವೇಳೆ ಗೃಹಸಚಿವ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಕೆ.ಸಿ.ನಾರಾಯಣಗೌಡ, ‘ಯುವರತ್ನ’ ನಿರ್ದೇಶಕ ಸಂತೋಷ ಆನಂದ್ ರಾಮ್, ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News