ಎ.15ರ ವೇಳೆಗೆ ಕೊರೋನ ತೀವ್ರ ಸ್ವರೂಪ ತಾಳುವ ಸಾಧ್ಯತೆ: ಕೇಂದ್ರ ಸಚಿವ ಸದಾನಂದ ಗೌಡ

Update: 2021-04-04 11:58 GMT

ಬೆಂಗಳೂರು, ಎ. 4: ಈ ತಿಂಗಳ 15ರ ವೇಳೆಗೆ ಕೊರೋನ ಸೋಂಕು ತೀವ್ರ ಸ್ವರೂಪ ತಾಳುವ ಸಾಧ್ಯತೆ ಇದ್ದು, ಪ್ರತಿಯೊಬ್ಬರು ಸೋಂಕು ಹರಡದಂತೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವ ಜೊತೆಗೆ ಅಂತರ ಕಾಯ್ದುಕೊಳ್ಳುವ ಮೂಲಕ ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸಲಹೆ ಮಾಡಿದ್ದಾರೆ.

ರವಿವಾರ ಇಲ್ಲಿನ ಮತ್ತಿಕೆರೆಯಲ್ಲಿ ನೂತನವಾಗಿ ಸ್ಥಾಪಿತವಾದ ರಾಜ್ಯ ವಿವಿಧ ಕಾರ್ಮಿಕ ಸಮನ್ವಯ ಸಮಿತಿಯ ಚಾಲನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೊರೋನ ಸೋಂಕಿನ ಎರಡನೆ ಅಲೆ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಜಾಸ್ತಿಯಾಗುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಕೆಲ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ.

ಇದನ್ನು ಕಡ್ಡಾಯವಾಗಿ ಪಾಲಿಸಬೇಕು, ವಿಶೇಷವಾಗಿ ಯುವ ಜನತೆಯಲ್ಲೂ ಕೂಡ ಕೊರೋನ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಈ ಬಗ್ಗೆ ವರದಿ ಇದೆ. ಯುವಕರು ಸರಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದ ಅವರು, ಕೊರೋನ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾರ್ಮಿಕರಿಗೆ ಪೂರಕವಾಗಿರುವಂತೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದರು.

ಕಾರ್ಮಿಕರ ಯೋಗಕ್ಷೇಮವೇ ನಮ್ಮ ಗುರಿಯಾಗಿದೆ. ನೂತನವಾಗಿ ಆರಂಭಗೊಂಡಿರುವ ಕಾರ್ಮಿಕ ಸಮನ್ವಯ ಸಮಿತಿ ಕಾರ್ಮಿಕರ ಏಳಿಗೆಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಸದಾನಂದಗೌಡ ತಿಳಿಸಿದರು.

ಸಮನ್ವಯ ಸಮಿತಿ ಅಧ್ಯಕ್ಷೆ  ಲಕ್ಷ್ಮೀ ಶ್ರೀಹರಿ ಜೆ.ಎನ್. ರಾಜ್ಯದ ಎಲ್ಲ ವಿಭಾಗದ ಕಾರ್ಮಿಕರನ್ನು ಒಂದೇ ವೇದಿಕೆಯಲ್ಲಿ ತರುವ ನಿಟ್ಟಿನಲ್ಲಿ ರಾಜ್ಯ ವಿವಿಧ ಕಾರ್ಮಿಕರ ಸಮನ್ವಯ ಸಮಿತಿಯನ್ಬು ಹುಟ್ಟು ಹಾಕಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮದರಸ ಇ ತನ್ ಫಸುಲ್ ಕುರನ್ ಜಮೀಯ ಮಸೀದಿ ಅಧ್ಯಕ್ಷ ಮೌಲಿ ಬಶೀರ್ ಉಲಾ ಖಾನ್, ಸಮನ್ವಯ ಸಮಿತಿ ಗೌರಾವಾಧ್ಯಕ್ಷ ವೇಣುಗೋಪಾಲ್ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News