ನಮ್ಮ ಪಕ್ಷದಲ್ಲಿನ ಜಗಳ ಗಂಡ-ಹೆಂಡತಿ ಕಚ್ಚಾಟ ಇದ್ದಂತೆ: ಶಾಸಕಿ ಅಂಜಲಿ ನಿಂಬಾಳ್ಕರ್

Update: 2021-04-04 14:26 GMT

ಬೆಳಗಾವಿ, ಎ. 4: ‘ಬಿಜೆಪಿಯವರ ಕಚ್ಚಾಟವನ್ನು ಕರ್ನಾಟಕ ರಾಜ್ಯ ಮಾತ್ರವಲ್ಲ, ಇಡೀ ದೇಶವೇ ನೋಡುತ್ತಿದೆ. ಆ ಪಕ್ಷದ ಹಿರಿಯ ಸಚಿವರೇ, ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ಪಕ್ಷವನ್ನು ಬಿಟ್ಟು ನಮ್ಮ ಪಕ್ಷದತ್ತ ಬೆರಳು ತೋರಿಸುತ್ತಿದ್ದಾರೆ' ಎಂದು ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ತಿರುಗೇಟು ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಮ್ಮ ಪಕ್ಷದಲ್ಲಿನ ಜಗಳ ಗಂಡ-ಹೆಂಡತಿ ಕಚ್ಚಾಟ ಇದ್ದಂತೆ. ನಾವು ಯಾವುದನ್ನೂ ದಾರಿಯಲ್ಲಿ ತೋರಿಸುವುದಿಲ್ಲ. ನಮ್ಮ ಮನೆ ಜಗಳವನ್ನು ನಮ್ಮ ಮನೆಯಲ್ಲಿಯೇ ನಾವು ಸಂಭಾಯಿಸುತ್ತೇವೆ. ಆದರೆ, ಬಿಜೆಪಿಯಲ್ಲಿನ ಕಚ್ಚಾಟವನ್ನು ಅವರು ಮೊದಲು ಸಂಭಾಳಿಸಲಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸಿಎಂ ಹಸ್ತಕ್ಷೇಪದ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷರು, ವಿಪಕ್ಷ ನಾಯಕರು ಸೇರಿ ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷರು ಮೊದಲು ತಮ್ಮ ಪಕ್ಷದಲ್ಲಿ ಆಂತರಿಕ ಭಿನ್ನಮತ ಸರಿಪಡಿಸಿಕೊಳ್ಳಲಿ' ಎಂದು ಅಂಜಲಿ ನಿಂಬಾಳ್ಕರ್ ಲೇವಡಿ ಮಾಡಿದರು.

ಇದೇ ಮೊದಲ ಬಾರಿಗೆ ಕ್ಷೇತ್ರ ಬಿಟ್ಟು ಬೆಳಗಾವಿ ಲೋಕಸಭೆ ಕ್ಷೇತ್ರದದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಮರಾಠ ಸಮಾಜದ ಬಾಂಧವರು ಅತ್ಯಂತ ಹುಮ್ಮಸ್ಸಿನಿಂದ ಇದ್ದಾರೆ. ಸತೀಶ ಜಾರಕಿಹೊಳಿಯವರನ್ನೆ ಗೆಲ್ಲಿಸುತ್ತೇವೆಂದು ಭರವಸೆ ನೀಡಿದ್ದಾರೆ ಎಂದು ಅಂಜಲಿ ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹಳ ಮುಖ್ಯವಾಗಿ ಮಹಿಳೆಯರಿಗೆ ಸಾಕಷ್ಟು ಅನ್ಯಾಯ ಆಗುತ್ಯಿದೆ ಎಂದ ಅವರು, ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರಕ್ಕೂ ತೆರಳಿ ನಮ್ಮ ಪಕ್ಷದ ಅಭ್ಯರ್ಥಿಪರ ಪ್ರಚಾರ ನಡೆಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News