ಹಾಸನ: ಸ್ಫೋಟಕ ಸಂಗ್ರಹಿಸಿದ್ದ ಗೋದಾಮಿನಲ್ಲಿ ಸ್ಫೋಟ; ಇಬ್ಬರು ಮೃತ್ಯು

Update: 2021-04-04 15:53 GMT

ಹಾಸನ, ಎ.4: ಸ್ಫೋಟಕ ವಸ್ತುಗಳನ್ನು ಇಳಿಸುವಾಗ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಮೃತಪಟ್ಟಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿ ಬಳಿ ನಡೆದಿದೆ.

ಚನ್ನರಾಯಪಟ್ಟಣದ ಶ್ರವಣಬೆಳಗೊಳದ ಬೆಟ್ಟದಹಳ್ಳಿ ಗ್ರಾಮದ ಸಂಪತ್ತು ಮತ್ತು ನಟರಾಜು ಮೃತಪಟ್ಟವರು. ಹಾಸನ ತಾಲೂಕು ಶಾಂತಿಗ್ರಾಮದ ರವಿ ಎಂಬವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾಕೇನಹಳ್ಳಿ ಗ್ರಾಮದ ಸಮೀಪವಿರುವ ಸ್ಫೋಟಕಗಳ ಗೋದಾಮಿನಲ್ಲಿ ಜಿಲೆಟಿನ್ ಕಡ್ಡಿ ಸೇರಿದಂತೆ ಇತರೆ ಸ್ಫೋಟಕ ವಸ್ತುಗಳನ್ನು ಅನ್ಲೋಡ್ ಮಾಡುವಾಗ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ದೌಡಾಯಿಸಿದ್ದಾರೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಎಎಸ್ಪಿ ನಂದಿನಿ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಐಸಿಪಿ ಪ್ರವೀಣ್ ಕುಮಾರ್ ಸ್ಥಳ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳವುದಾಗಿ ತಿಳಿಸಿದರು. ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ ತಾಲೂಕಿನ ಚಾಕೇನಹಳ್ಳಿಯ ಗೋದಾಮಿನಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಸಂಪತ್(27) ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಬ್ಬ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಅಗತ್ಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆ ಸ್ಫೋಟಕಗಳನ್ನು ದಾಸ್ತಾನು ಮಾಡುವಾಗ, ಸಾಗಣೆ ಮತ್ತು ಬಳಕೆ ಮಾಡುವಾಗ ಅತ್ಯಂತ ಜಾಗರೂಕತೆ ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇನೆ

-ಮುರುಗೇಶ್ ಆರ್.ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News