ಕುಮಾರಸ್ವಾಮಿ ವಿರುದ್ಧ ಹೇಳಿಕೆ: ಝಮೀರ್ ಅಹ್ಮದ್ ಮನೆಗೆ ಜೆಡಿಎಸ್ ಕಾರ್ಯಕರ್ತರಿಂದ ಮುತ್ತಿಗೆ ಯತ್ನ

Update: 2021-04-04 15:05 GMT

ಬೆಂಗಳೂರು, ಎ.4: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುರಿತು ಆಧಾರ ರಹಿತ ಆರೋಪಗಳನ್ನು ಮಾಡಿರುವ ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್ ಖಾನ್ ಈ ಕೂಡಲೇ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರವಿವಾರ ಇಲ್ಲಿನ ಶಿವಾಜಿನಗರದ ಝಮೀರ್ ಅಹ್ಮದ್ ಖಾನ್ ನಿವಾಸದ ಮುಂಭಾಗ ಜಮಾಯಿಸಿದ ಜೆಡಿಎಸ್ ಯುವ ಘಟಕದ ಕಾರ್ಯಕರ್ತರು ಝಮೀರ್ ಅವರು ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯ ಮಾಡಿದರು.

ಜೆಡಿಎಸ್ ಮತ್ತು ಕುಮಾರಸ್ವಾಮಿ ಅವರು ಆಲದ ಮರವಿದ್ದಂತೆ. ನಿಮ್ಮಂತಹ ನಾಯಕರನ್ನು ಸೃಷ್ಟಿ ಮಾಡುವ ಕಾರ್ಖಾನೆ ಇದ್ದಂತೆ. ಅಲ್ಲದೆ, ಉಂಡ ಮನೆಗೆ ದ್ರೋಹ ಬಗೆದಿರುವ ನೀವು, ತಕ್ಷಣವೇ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ಹೊರಬರಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯಲ್ಲಿ ಝಮೀರ್ ವಿರುದ್ಧ ಧಿಕ್ಕಾರ ಕೂಗಿದ ಜೆಡಿಎಸ್ ಕಾರ್ಯಕರ್ತರು ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಬಳಿಕ ಪ್ರತಿಭಟನಾಕಾರರನ್ನು ಪೊಲೀಸರು ಸ್ಥಳದಿಂದ ತೆರವುಗೊಳಿಸಿದರು. ಈ ವೇಳೆ ಪೊಲೀಸರು ಮತ್ತು ಜೆಡಿಎಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News