ಒಂದೇ ವೇದಿಕೆಯಲ್ಲಿದ್ದರೂ ಒಬ್ಬರನ್ನೊಬ್ಬರು ಮಾತನಾಡಿಸದ ಸಿಎಂ ಯಡಿಯೂರಪ್ಪ- ಸಚಿವ ಈಶ್ವರಪ್ಪ

Update: 2021-04-04 16:17 GMT

ದಾವಣಗೆರೆ, ಎ.4: ಕನಕಪೀಠದ ಬೆಳ್ಳೂಡಿ ಶಾಖಾಮಠದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಭಾಗವಹಿಸಿದ್ದರು. ಆದರೆ ಒಮ್ಮೆಯೂ ಒಬ್ಬರನೊಬ್ಬರು ನೋಡದೇ, ಮಾತನಾಡಿಸದೇ ದೂರ ಉಳಿದಿದ್ದರು. 

ಕಾರ್ಯಕ್ರಮ ಆರಂಭಕ್ಕೂ ಒಂದು ಗಂಟೆ ಮುನ್ನವೇ ಆಗಮಿಸಿದ್ದ ಈಶ್ವರಪ್ಪ, ಮಾಧ್ಯಮದವರು ಮಾತಿಗೆಳೆದಾಗ ನಯವಾಗಿಯೇ ತಿರಸ್ಕರಿಸಿದರು. ನಂತರ ಯಡಿಯೂರಪ್ಪ ಉಪಚುನಾವಣೆಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿ ಬೇರೆ ಪ್ರಶ್ನೆಗಳಿಗೆ ಉತ್ತರಿಸದೆ ತೆರಳಿದರು.

ಮುಖ್ಯಮಂತ್ರಿ ತನ್ನ ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಈಶ್ವರಪ್ಪ ಅವರು ರಾಜ್ಯಪಾಲರು ಮತ್ತು ಹೈಕಮಾಂಡ್‍ಗೆ ದೂರು ನೀಡಿದ್ದರು. ಬಳಿಕ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವಿನ ಸಂಬಂಧ ಇನ್ನಷ್ಟು ಹಳಸಿತ್ತು.

ಸಿಎಂ ಬಿಎಸ್‍ವೈ ಹೊಗಳಿದ ಸಚಿವ ಈಶ್ವರಪ್ಪ
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರ ಕಣ್ಮಣಿಯಾಗಿದ್ದಾರೆ. ಕನಕದಾಸ ಜಯಂತಿಗೆ ಯಡಿಯೂರಪ್ಪ ಅವಕಾಶ ಮಾಡಿ ಕೊಟ್ಟಿದ್ದು ಎಂದಿಗೂ ಮರೆಯುವಂತಿಲ್ಲ ಎಂದು ಕಾರ್ಯಕ್ರಮದಲ್ಲಿ ಬಿಎಸ್‍ವೈ ಅವರನ್ನು ಸಚಿವ ಕೆ.ಎಸ್ ಈಶ್ವರಪ್ಪ ಗುಣಗಾನ ಮಾಡಿದರು.

ಬಿಎಸ್‍ವೈ ನೇತೃತ್ವದಲ್ಲಿ ರಾಜ್ಯದಲ್ಲಿ ಮೀಸಲಾತಿಯನ್ನು ಶೇ.50ಗಿಂತ ಜಾಸ್ತಿ ಮಾಡಲು ಬಜೆಟ್‍ನಲ್ಲಿ ಒಪ್ಪಿದ್ದೇವೆ. ಅಲ್ಲದೇ ಕನಕದಾಸ ಜಯಂತಿ ಆರಂಭಿಸಿದ್ದು ಬಿಜೆಪಿ ಸರ್ಕಾರ ಎಂದ ಅವರು, ಪಾದಯಾತ್ರೆ ಆರಂಭಿಸಬೇಕೆಂದಾಗ ನಮಗೆ ಹೆದರಿಕೆಯಾಯಿತು. ಇದು ಸಾಧ್ಯವಾಗುತ್ತಾ ಎನ್ನುವ ಭಯವಿತ್ತು. ಅದರೆ, ಪಾದಯಾತ್ರೆ ಯಶಸ್ವಿಯಾಯಿತು. ಇಡೀ ಸಮುದಾಯ ಮತ್ತು ರಾಜಕಾರಣಿಗಳನ್ನುವನ್ನು ಪಾದಯಾತ್ರೆ ಒಂದು ಮಾಡಿತು. ಎಲ್ಲಾ ಸಮಾಜಗಳಿಗೂ ಮೀಸಲಾತಿ ಹೋರಾಟ ಮಾದರಿಯಾಯಿತು. ನಾವು ಕುರುಬ ಸಮಾಜಕ್ಕೆ ಮಾತ್ರ ಮೀಸಲಾತಿ ಕೇಳಲಿಲ್ಲ. ಕೊಲಿ, ಕುರುಬ, ಸವಿತಾ ಸಮಾಜ ಕೇಳಿದ್ದೇವೆ. ಇಬ್ಬರು ಸ್ವಾಮೀಜಿಗಳ ಪ್ರಯತ್ನ ಕುರುಬ ಸಮುದಾಯಕ್ಕೆ ಸೀಮಿತವಾಗಿಲ್ಲ. ಹಿಂದುಳಿದ ಸಮಾಜದ 35 ಸಮಾಜಗಳನ್ನು ಸೇರಿಸಿದ್ದರು ಎಂದರು.  

ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದಾಗ 100 ಕೋಟಿ ರೂ. ಅನುದಾನವನ್ನು ಹಿಂದುಳಿದ ಸಮಾಜಕ್ಕೆ ಕೇಳಿದ್ದರು. ಇದರ ನೇತೃತ್ವವನ್ನು ಕುರುಬ ಸ್ವಾಮೀಜಿಗಳು ವಹಿಸಿದ್ದರು. ಮೀಸಲಾತಿ ಹಾಗು ಹೊಸದುರ್ಗದ ಕನಕದಾಸ ಪ್ರತಿಮೆ ನಿಲ್ಲಿಸಬೇಕೆಂಬುದು ಸ್ವಾಮೀಜಿ ಅಭಿಮತವಾಗಿದೆ. ಸಿಎಂ ಮುಂದೆ ಎರಡು ಬೇಡಿಕೆ ಇಟ್ಟಿದ್ದು, ಸಂತೋಷವಾಗಿದೆ. ಈ ಪ್ರಯತ್ನದಲ್ಲಿ ನ್ಯಾಯ ಸಿಗಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News