8 ಬೇಡಿಕೆಗಳನ್ನು ಈಡೇರಿಸಿದ್ದೇವೆ, ಮುಷ್ಕರ ಕೈಬಿಟ್ಟು ಸಹಕರಿಸಿ: ಸಾರಿಗೆ ನೌಕರರಿಗೆ ಡಿಸಿಎಂ ಸವದಿ ಮನವಿ

Update: 2021-04-05 16:28 GMT

ಬೆಂಗಳೂರು, ಎ.5: ಕಳೆದ ಡಿಸೆಂಬರ್ ನಲ್ಲಿ ಸಾರಿಗೆ ಸಿಬ್ಬಂದಿಗಳು ಒಟ್ಟು 10 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಿದ ಸಂದರ್ಭದಲ್ಲಿ ನಾನು ಕಾರ್ಮಿಕ ಸಂಘಟನೆಗಳೊಂದಿಗೆ ಹಲವು ಸುತ್ತಿನ ಸಂಧಾನ ಸಭೆ ನಡೆಸಿ, 10 ಬೇಡಿಕೆಗಳ ಪೈಕಿ 9 ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಲಾಗಿತ್ತು. ಆ ಪ್ರಕಾರ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ ಎಂದು ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸಾರಿಗೆ ಸಿಬ್ಬಂದಿಗಳು ಮುಂದಿಟ್ಟ 10ನೆ ಬೇಡಿಕೆಯನ್ನು ಕಾರ್ಮಿಕ ಒಕ್ಕೂಟಗಳ ಸಭೆಯಲ್ಲೆ ತಿರಸ್ಕರಿಸಲಾಗಿತ್ತು. ಜ್ಯೋತಿ ಸಂಜೀವಿನಿ ಯೋಜನೆಯ ಸಾಧಕ ಬಾಧಕಗಳನ್ನು ಪರಿಶೀಲಿಸಲಾಗಿದೆ. ಸರಕಾರವು ‘ಆರೋಗ್ಯ ಸಿರಿ’ ಯೋಜನೆಯನ್ನು ಜಾರಿಗೆ ತಂದಲ್ಲಿ ಅದರ ಸಾಧಕ ಬಾಧಕಗಳನ್ನು ಗಣನೆಗೆ ತೆಗೆದುಕೊಂಡು ನಿಗಮದಲ್ಲಿ ಅಳವಡಿಸಿಕೊಳ್ಳಲು ಪರಿಶೀಲಿಸಲಾಗುವುದು ಎಂದರು.

ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಮೃತಪಟ್ಟ ನಿಗಮದ ನೌಕರರ ಪೈಕಿ 7 ನೌಕರರ ಕುಟುಂಬದವರಿಗೆ ಪ್ರಸಕ್ತ ಸಾಲಿನ ಫೆ.26ರಂದು ಮುಖ್ಯಮಂತ್ರಿಯವರಿಂದ ತಲಾ 30 ಲಕ್ಷ ರೂ.ಗಳ ಚೆಕ್‍ಗಳನ್ನು ನೀಡಲಾಗಿದೆ. ಉಳಿದ ಪ್ರಕರಣಗಳನ್ನು ನಿಯಮಾನುಸಾರ ಪರಿಹಾರವನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಸಾರಿಗೆ ಸಂಸ್ಥೆಗಳಲ್ಲಿ ಎಚ್‍ಆರ್‍ಎಂಎಸ್ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಅದರಂತೆ ರಜೆ ನಿರ್ವಹಣೆ ಮತ್ತು ಡ್ಯೂಟಿರೋಟಾ ಪದ್ಧತಿ, ಭವಿಷ್ಯನಿಧಿ, ಐಚ್ಛಿಕ ಭವಿಷ್ಯ ನಿಧಿ ಮಾಹಿತಿ, ನೌಕರರ ಕುಂದುಕೊರತೆ ನಿವಾರಣೆ, ವರ್ಗಾವಣೆ ತಂತ್ರಾಂಶ ಮತ್ತು ಪೇ ರೋಲ್ ವ್ಯವಸ್ಥೆ, ಐಟಿಎಸ್ ವ್ಯವಸ್ಥೆಯಡಿ ನೌಕರರ ಮೇಲೆ ದಾಖಲಿಸಬಹುದಾದ ನಕಲಿ ಅಪಘಾತ ಪ್ರಕರಣಗಳನ್ನು ತಪ್ಪಿಸಬಹುದು ಎಂದು ಅವರು ಹೇಳಿದರು.

ನಿಗಮದ ಸಿಬ್ಬಂದಿಗಳು ದಿನದ ಕರ್ತವ್ಯದ ಸಲುವಾಗಿ ಅರ್ಹ ವಿವಿಧ ಭತ್ತೆಗಳು ಮತ್ತು ಬಾಟಾಗಳು ಹಾಗೂ ಮಾಸಿಕ ಭತ್ತೆಗಳನ್ನು ಪ್ರಸಕ್ತ ಸಾಲಿನ ಮಾ.1 ರಿಂದ ಜಾರಿಗೆ ಬರುವಂತೆ ನೀಡಲು ಸೂಚಿಸಿ ಆದೇಶವನ್ನು ಈಗಾಗಲೆ ಹೊರಡಿಸಲಾಗಿದೆ ಮತ್ತು ಅದರಂತೆ ಕ್ರಮ ಜಾರಿಯಲ್ಲಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಚಾಲಕ ನಿರ್ವಾಹಕರಿಗೆ ಅನುಸೂಚಿಗಳ ನಿಗದಿ ವಿಚಾರದಲ್ಲಿ ಏಕರೀತಿಯ ಅಂಶಗಳನ್ನು ಅನುಸರಿಸಲು ಸಿಇಟಿ ಮಾದರಿಯಲ್ಲಿ ಕರ್ತವ್ಯ ನಿಯೋಜನೆಯ ಪದ್ಧತಿಯನ್ನು ಪ್ರಸಕ್ತ ಸಾಲಿನ ಫೆ.1 ರಿಂದ ಎಲ್ಲ ಸಾರಿಗೆ ನಿಗಮಗಳಲ್ಲಿ ಜಾರಿಗೆ ತರಲಾಗಿದೆ. ನೌಕರರಿಗೆ ರಜಾ ಮಂಜೂರಾತಿ ಕುರಿತಂತೆ ಪಾರದರ್ಶಕ ಮತ್ತು ತಂತ್ರಾಂಶ ಆಧಾರಿತ ರಜಾ ನಿರ್ವಹಣಾ ವ್ಯವಸ್ಥೆ ಜಾರಿಗೆ ತರಲಾಗಿದೆ. ನೌಕರರ ಸೇವಾ ಸಂಬಂಧಿತ ಕುಂದುಕೊರತೆ ಸಮಸ್ಯೆಗಳನ್ನು ಪರಿಶೀಲಿಸಿ, ಬಗೆಹರಿಸುವ ಪದ್ಧತಿ ಜಾರಿಯಲ್ಲಿದೆ ಎಂದು ಅವರು ಹೇಳಿದರು.

ತನಿಖಾ ಕಾರ್ಯದಲ್ಲಿ ಪಾರದರ್ಶಕತೆಯನ್ನು ತರುವ ಸಲುವಾಗಿ ತನಿಖಾ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಬಾಡಿ ಕ್ಯಾಮರಾವನ್ನು ಬಳಸುವಂತೆ ನಿರ್ದೇಶನಗಳನ್ನು ಫೆ.3ರಂತೆ ನೀಡಲಾಗಿದೆ ಮತ್ತು ಅದರಂತೆ ಕ್ರಮ ಜಾರಿಯಲ್ಲಿದೆ. ಅಲ್ಲದೆ, ಎಚ್‍ಆರ್‍ಎಂಎಸ್ ತಂತ್ರಾಂಶ ಆಧಾರಿತ ಕುಂದುಕೊರತೆಗಳ ನಿವಾರಣೆಯ ಉಪಕ್ರಮವನ್ನು ಅಳವಡಿಸಿಕೊಳ್ಳಲಾಗುವುದು. ತರಬೇತಿ ಅವಧಿಯನ್ನು ಪ್ರಸ್ತುತ ಇರುವ 2 ವರ್ಷಗಳಿಂದ 1 ವರ್ಷಕ್ಕೆ ಇಳಿಸಲು ಆದೇಶ ಹೊರಡಿಸಲಾಗಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಎನ್‍ಐಎನ್‍ಸಿ ಪ್ರಕರಣಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಪರಿಷ್ಕೃತ ನಿದೇರ್ಶನಗಳ ಆದೇಶವನ್ನು ಹೊರಡಿಸಲಾಗಿದೆ. ತನಿಖಾ ಕಾರ್ಯದಲ್ಲಿ ಪಾರದರ್ಶಕತೆಯನ್ನು ತರುವ ಸಲುವಾಗಿ ತನಿಖಾ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಬಾಡಿಕ್ಯಾಮರಾವನ್ನು ಬಳಸುವಂತೆ ನಿರ್ದೇಶನಗಳನ್ನು ನೀಡಲಾಗಿದೆ. ಅಂತರ ನಿಗಮ ವರ್ಗಾವಣೆ ನೀತಿಯನ್ನು ಜಾರಿಗೆ ತರಲು ಆದೇಶ ಹೊರಡಿಸಿದ್ದು, ಅದರನ್ವಯ ಅರ್ಜಿಗಳನ್ನು ಎ.1ರಿಂದ ಆನ್‍ಲೈನ್ ಮೂಲಕ ಪಡೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಈ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದರೂ ಎ.7ರಿಂದ ಪುನಃ ಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ಕೆಲವರು ಕರೆ ನೀಡಿರುವುದು ದುರಾದೃಷ್ಟಕರ. ಮುಷ್ಕರ ಹೂಡಿದಲ್ಲಿ ಸಾರ್ವಜನಿಕರ ಜೀವನ ನಿರ್ವಹಣೆಯ ಹಕ್ಕನ್ನು ಉಲ್ಲಂಘಿಸಿದಂತೆ ಆಗುತ್ತದೆ. ಕಳೆದ ಮುಷ್ಕರದ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹೈಕೋರ್ಟ್ ನಲ್ಲಿ ಬಾಕಿ ಇದೆ. ರಾಜ್ಯ ಸರಕಾರ ಹಾಗೂ ಆಡಳಿತ ವರ್ಗಕ್ಕೆ ನೋಟಿಸ್ ಜಾರಿಯಾಗಿದೆ ಎಂದು ಅವರು ತಿಳಿಸಿದರು.

ಪುನಃ ಮುಷ್ಕರ ಹೂಡಿ, ಅನ್ನದಾತ ಸಾರ್ವಜನಿಕರ ತಾಳ್ಮೆಯನ್ನು ನಾವು ಪರೀಕ್ಷಿಸಬಾರದು. ಮಾತೃ ಸ್ಥಾನದಲ್ಲಿರುವ ಸಾರಿಗೆ ನಿಗಮಗಳ ಅಳಿವು-ಉಳಿವು ಮತ್ತು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನಾವು ಜವಾಬ್ದಾರಿಯಿಂದ ಸೇವೆ ಸಲ್ಲಿಸಬೇಕಾಗಿದೆ. ಆದುದರಿಂದ, ಎ.7ರಂದು ನಡೆಸಲು ಉದ್ದೇಶಿಸಿರುವ ಮುಷ್ಕರವನ್ನು ಕೈಬಿಟ್ಟು ಸಾರ್ವಜನಿಕ ಸೇವೆಗೆ ಸ್ಪಂದಿಸುವಂತೆ ಲಕ್ಷ್ಮಣ ಸವದಿ ಮನವಿ ಮಾಡಿದರು.

ಪ್ರಸ್ತುತ ಪರೀಕ್ಷೆಯ ಸಮಯವಾಗಿರುವುದರಿಂದ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಮತ್ತು ಆತಂಕ ಎದುರಾಗುತ್ತದೆ. ಅಸಂಖ್ಯಾತ ಬಡ ಕಾರ್ಮಿಕರಿಗೆ ತಮ್ಮ ಕೆಲಸ ಕಾರ್ಯ ನಿರ್ವಹಣೆಗೂ ಅಸಾಧ್ಯವಾಗಿ ಅವರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುವಂತಾಗುತ್ತದೆ. ಸದ್ಯದಲ್ಲೆ ಉಪ ಚುನಾವಣೆಗಳು ನಡೆಯುವುದರಿಂದ ಬಸ್ಸುಗಳ ಸೇವೆ ಚುನಾವಣಾ ಕೆಲಸ ಕಾರ್ಯಗಳಿಗೆ ಅಗತ್ಯವಾಗಿದ್ದು, ಮುಷ್ಕರ ನಡೆದರೆ ಈ ಚುನಾವಣಾ ಪ್ರಕ್ರಿಯೆಗೂ ತೊಡಕಾಗುತ್ತದೆ ಎಂದು ಅವರು ಹೇಳಿದರು.

ಕಾರ್ಮಿಕ ನ್ಯಾಯಾಲಯವು ಈ ಮುಷ್ಕರ ಕುರಿತು ವಿಚಾರಣೆ ನಡೆಸುತ್ತಿದೆ. ಈ ಸಮಯದಲ್ಲಿ ಮುಷ್ಕರಕ್ಕೆ ಹೋಗುವುದು ಸರಿಯಲ್ಲ. ಮಾ.16ರಂದು ಉಪ ಚುನಾವಣೆಗಳ ಮಾದರಿ ನೀತಿ ಸಂಹಿತೆ ಘೋಷಣೆಯಾಗಿದೆ. ಅದೇ ದಿನ ಈ ಮುಷ್ಕರಕ್ಕೆ ಕರೆ ಕೊಟ್ಟಿರುವುದರಿಂದ ಕೆಲವೊಂದು ನಿರ್ಧಾರ ಕೈಗೊಳ್ಳಲು ಚುನಾವಣಾ ಆಯೋಗದ ಅನುಮತಿ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

6ನೆ ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಗಣಿಸುವಂತೆ ಸಾರಿಗೆ ನಿಗಮಗಳ ನೌಕರರು ಕೋರಿದ್ದು, ಪ್ರಸ್ತುತ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಯಾವುದೇ ಘೋಷಣೆ ಮಾಡಬೇಕಾದರೂ ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆಯಬೇಕು. ಅವರು ಅನುಮತಿ ನೀಡಿದರೆ ವೇತನ ಪರಿಷ್ಕರಣೆಯ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಬಹುದು. ಕೋವಿಡ್‍ಗೆ ಮುನ್ನ ಪ್ರತಿನಿತ್ಯ 1 ಕೋಟಿ ಪ್ರಯಾಣಿಕರು ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಸಂಚರಿಸುತ್ತಿದ್ದರು. ಈಗ 60 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಪ್ರತಿವರ್ಷ ನಾಲ್ಕು ನಿಗಮಗಳಿಂದ 3200 ಕೋಟಿ ರೂ.ನಷ್ಟವಾಗುತ್ತಿದೆ. ಕಳೆದ ಬಾರಿ ನಾಲ್ಕು ದಿನ ಮುಷ್ಕರ ಮಾಡಿದ್ದಕ್ಕೆ 7 ಕೋಟಿ ರೂ.ನಷ್ಟವಾಗಿತ್ತು.

-ಲಕ್ಷ್ಮಣ ಸವದಿ, ಡಿಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News