ಕೆಪಿಎಸ್‌ಸಿ ನೂತನ ಅಧ್ಯಕ್ಷರ ನೇಮಕಾತಿ ವಿವಾದ: 'ಅರ್ಹತೆ'ಯ ಬಗ್ಗೆಯೇ ಆಕ್ಷೇಪ, ನಿಯಮಾವಳಿಗಳ ಉಲ್ಲಂಘನೆಯ ಆರೋಪ

Update: 2021-04-07 13:18 GMT
ಶಿವಶಂಕರಪ್ಪ ಎಸ್.ಸಾಹುಕಾರ್

ಬೆಂಗಳೂರು, ಎ. 7: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ ನೂತನ ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಎಸ್.ಸಾಹುಕಾರ್ ಅವರನ್ನು 'ತರಾತುರಿ'ಯಲ್ಲಿ ನೇಮಕ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿರುವುದಲ್ಲದೆ, ನಿಯಮಾವಳಿಗಳ ಉಲ್ಲಂಘನೆಯ ಆರೋಪವೂ ಕೇಳಿಬಂದಿದೆ.

ಎ.3ರ ಶನಿವಾರ ಸಂಜೆ ಕೆಪಿಎಸ್‌ಸಿ ಅಧ್ಯಕ್ಷ ಷಡಕ್ಷರ ಸ್ವಾಮಿಯವರು ನಿವೃತ್ತಿಗೊಳ್ಳಲಿದ್ದರು. ತಾಂತ್ರಿಕವಾಗಿ ಅಂದು ರಾತ್ರಿ 12 ಗಂಟೆಗೆ ಅವರ ಸೇವಾವಧಿ ಮುಗಿಯುತಿತ್ತು. ಸರಕಾರಿ ನಿಯಮಾವಳಿಗಳ ಪ್ರಕಾರ ಅವರ ನಿವೃತ್ತಿಯ ಮರುದಿನ ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡುವುದು ವಾಡಿಕೆ. ಆದರೆ, ಆ ನಿಯಮವನ್ನೂ ಉಲ್ಲಂಘಿಸಿ ಎ.3ರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ತರಾತುರಿಯಲ್ಲಿ ಕೆಪಿಎಸ್‌ಸಿ ನೂತನ ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಎಸ್.ಸಾಹುಕಾರ್ ಅವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರಕಾರದ ಉಪಕಾರ್ಯದರ್ಶಿ ಡಾ.ಕೆ.ಆನಂದ್ ಅವರು ರಾಜ್ಯಪಾಲರ ಆದೇಶಾನುಸಾರ ಅಧಿಸೂಚನೆ ಹೊರಡಿಸಿದ್ದಾರೆ.

ಅಲ್ಲದೆ, ಆಯೋಗದ ಅಧ್ಯಕ್ಷ ಅಥವಾ ಸದಸ್ಯನಾಗಿ ನೇಮಕಗೊಳ್ಳಲು ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರದ ಅಧೀನದಲ್ಲಿ ಕನಿಷ್ಠ 10 ವರ್ಷಗಳ ಕರ್ತವ್ಯ ನಿರ್ವಹಿಸಬೇಕು ಎಂಬ ನಿಯಮವಿದೆ. ಆದರೆ, ಶಿವಶಂಕರಪ್ಪ ಎಸ್.ಸಾಹುಕಾರ್ ಅವರ ನೇಮಕಾತಿಯಲ್ಲಿ ಸಂವಿಧಾನದ 316ನೆ(1) ವಿಧಿ ಅನ್ವಯ ನೇಮಕ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದ್ದರೂ ಆ ಅನುಚ್ಛೇದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ಜತೆಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಿವಶಂಕರಪ್ಪ ಎಸ್.ಸಾಹುಕಾರ್ ಅವರು ಹತ್ತು ವರ್ಷಗಳ ಹಿಂದೆ 'ರಾಷ್ಟ್ರೀಯ ಸಹಕಾರಿ ಯೂನಿಯನ್'ನಲ್ಲಿ 'ಗುತ್ತಿಗೆ ಆಧಾರ'ದಲ್ಲಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಇವರ `ಗುತ್ತಿಗೆ ಅವಧಿಯನ್ನು ವಿಸ್ತರಿಸಬಾರದು' ಎಂದು ಹೊರಡಿಸಿದ್ದ ಆದೇಶವೊಂದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಶಿವಶಂಕರಪ್ಪ ಎಸ್.ಸಾಹುಕಾರ್ ಅವರ ಕಾರ್ಯವೈಖರಿಯ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ.

ಅರ್ಹತೆಯ ಬಗ್ಗೆ ಆಕ್ಷೇಪ: ಕೆಪಿಎಸ್‌ಸಿ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಕ್ಕೆ ನೇಮಕಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರಕಾರದ ಅಧೀನದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ, ಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವುದು ಸಂವಿಧಾನಕ್ಕೆ ವಿರುದ್ಧವಾದದ್ದು. ಕೆಪಿಎಸ್‌ಸಿ, ಕರ್ನಾಟಕ ಆಡಳಿತಾತ್ಮಕ ಸೇವೆ(ಕೆಎಎಸ್) ಹುದ್ದೆಗಳು ಸೇರಿದಂತೆ 'ಎ', 'ಬಿ' ಹಾಗೂ 'ಸಿ' ದರ್ಜೆ ಒಳಗೊಂಡಂತೆ ಸರಕಾರದ ಉನ್ನತ ಗ್ರೂಪ್ ನ ಅಧಿಕಾರಿ ಮತ್ತು ನೌಕರರನ್ನು ಆಯ್ಕೆ ಮಾಡುವ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಕ್ಕೆ ಸೂಕ್ತ ಅರ್ಹತೆ ಮತ್ತು ಸರಕಾರದ ಉನ್ನತ ಹುದ್ದೆಯಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಿದ ವ್ಯಕ್ತಿಯನ್ನು ನೇಮಿಸಬೇಕಾಗಿತ್ತು.

ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸಹಕಾರಿ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಿದ ಶಿವಶಂಕರಪ್ಪ ಎಸ್.ಸಾಹುಕಾರ್ ಅವರನ್ನು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ ಅಧ್ಯಕ್ಷ ಸ್ಥಾನದಂತಹ ಉನ್ನತ ಹುದ್ದೆಗೆ ನೇಮಕ ಮಾಡಿರುವುದಕ್ಕೆ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಮಾತ್ರವಲ್ಲ, ನಿಯಮಾವಳಿಗಳನ್ನು ಪಾಲಿಸಿಲ್ಲ ಎಂಬ ಆರೋಪಕ್ಕೂ ರಾಜ್ಯ ಸರಕಾರ ಗುರಿಯಾಗಿದೆ.

'ಶಿವಶಂಕರಪ್ಪ ಎಸ್.ಸಾಹುಕಾರ್ ಅವರು ಯಾವುದೇ ವಿಷಯದಲ್ಲಿ ವಿದ್ವಾಂಸರಲ್ಲ. ಕನಿಷ್ಠ ಯಾವುದೇ ಭಾಷೆಯಲ್ಲಿ ಪ್ರವೀಣರೂ ಅಲ್ಲ. ಈ ಹಿಂದೆ, ಯಾವುದೇ ಸರಕಾರಿ ಹುದ್ದೆಯನ್ನು ದಕ್ಷತೆಯಿಂದ ಕಾರ್ಯನಿರ್ವಹಿಸಿದ ಅನುಭವವೂ ಅವರಿಗೆ ಇಲ್ಲ. ಸಂವಿಧಾನಾತ್ಮಕ ರಕ್ಷಣೆ ಇರುವ ಇಂತಹದ್ದೊಂದು ಉನ್ನತ ಹುದ್ದೆಯ ನೇಮಕಾತಿ ನಡೆಯುವಾಗ ಇದಕ್ಕೆ ಸಚಿವ ಸಂಪುಟದ ಅನುಮೋದನೆಯನ್ನೂ ಪಡೆದಿಲ್ಲ ಎಂಬ ಅಪಸ್ವರವೂ ವ್ಯಕ್ತವಾಗಿದೆ.

ಸರಕಾರವೇ ವ್ಯಾಪಾರಕ್ಕೆ ನಿಂತಿದೆ

ಲೋಕಸೇವಾ ಆಯೋಗದಂತಹ ಪ್ರತಿಷ್ಠಿತ ಸಂಸ್ಥೆಗಳ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವಾಗ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಕೇಂದ್ರ ಸರಕಾರ ಸ್ಪಷ್ಟವಾಗಿ ಸೂಚಿಸಿದೆ. ಇಷ್ಟೆಲ್ಲ ರೀತಿ ನೀತಿಗಳಿದ್ದರೂ ರಾಜ್ಯ ಸರಕಾರ, ಮಾರ್ಗಸೂಚಿಯನ್ನು ಉಲ್ಲಂಘಿಸಿ ನೇಮಕ ಮಾಡಿದೆ ಎಂದರೆ, ಸರಕಾರವೇ ವ್ಯಾಪಾರಕ್ಕೆ ನಿಂತಿದೆ, ಕೆಪಿಎಸ್ಸಿ ಭ್ರಷ್ಟಾಚಾರದ ಕೇಂದ್ರವಾಗಿದೆ ಎಂದರ್ಥ.

-ಡಾ.ಸಿ.ಎಸ್. ದ್ವಾರಕಾನಾಥ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ

ನೇಮಕಾತಿ ವಿರುದ್ಧ ಹೈಕೋರ್ಟ್ ಗೆ ಅರ್ಜಿ

ಕೆಪಿಎಸ್ಸಿ ಅಧ್ಯಕ್ಷರ ನೇಮಕದಲ್ಲಿ ರಾಜ್ಯ ಸರಕಾರ ಹೈಕೋರ್ಟಿನ ಆದೇಶ ಮತ್ತು ಹೋಟಾ ಕಮಿಟಿ ಶಿಫಾರಸ್ಸಿನ ಮಾನದಂಡಗಳನ್ನು ಉಲ್ಲಂಘಿಸಿದೆ. ಕರ್ನಾಟಕ ಆಡಳಿತಾತ್ಮಕ ಸೇವೆ(ಕೆಎಎಸ್) ಸೇರಿದಂತೆ ವಿವಿಧ ಹಂತದ ಹುದ್ದೆಗಳ ನೇಮಕ ಮಾಡುವ ಉನ್ನತ ಸ್ಥಾನಕ್ಕೆ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿಯಲ್ಲಿ ಪಾರದರ್ಶಕತೆ ಇರಬೇಕಾಗುತ್ತದೆ. ಆದರೆ, ರಾಜಕೀಯ ಹಿನ್ನೆಲೆಯ ವ್ಯಕ್ತಿಗಳನ್ನು ನೇಮಕ ಮಾಡುವ ಮೂಲಕ ಸಂಶಯಕ್ಕೆ ಎಡೆಮಾಡಿ ಕೊಡುವುದು ಸರಿಯಲ್ಲ. ಸರಕಾರಿ ಗುಮಾಸ್ತನ ಹುದ್ದೆಗೆ ನೇಮಕವಾಗಲು ಕೆಲ ಮಾನದಂಡಗಳಿವೆ. ಆದರೆ, ಅವರನ್ನು ಆಯ್ಕೆ ಮಾಡುವ ಕೆಪಿಎಸ್ಸಿ ಸಂಸ್ಥೆ ಅಧ್ಯಕ್ಷ- ಸದಸ್ಯರಿಗೆ ಮಾನದಂಡ ಏಕಿಲ್ಲ ಎಂಬುದು ನಮ್ಮ ಪ್ರಶ್ನೆ. ಈ ವಿಚಾರಕ್ಕೆ ಸಂಬಂಧ ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದೇವೆ.

-ಎಸ್.ಉಮಾಪತಿ, ಹೈಕೋರ್ಟ್ ವಕೀಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News