ಸಾರಿಗೆ ನೌಕರರ ಮುಷ್ಕರ: ರಾಜ್ಯದೆಲ್ಲೆಡೆ ಪ್ರಯಾಣಿಕರ ಪರದಾಟ, ಖಾಸಗಿ ಬಸ್‍ಗಾಗಿ ನೂಕುನುಗ್ಗಲು

Update: 2021-04-07 17:20 GMT

ಬೆಂಗಳೂರು, ಎ.7: ಆರನೆ ವೇತನ ಆಯೋಗದ ಶಿಫಾರಸು ಜಾರಿ, ಸರಕಾರಿ ನೌಕರರೆಂದು ಪರಿಗಣಿಸಬೇಕೆಂದು ಪಟ್ಟು ಹಿಡಿದು ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯದೆಲ್ಲೆಡೆ ಪ್ರಯಾಣಿಕರು ತೀವ್ರ ತೊಂದರೆಗೆ ಸಿಲುಕಿದ್ದಾರೆ.

ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ವಿಭಾಗಗಳ ನೌಕರರು ಬುಧವಾರ ಪೂರ್ಣ ಪ್ರಮಾಣದಲ್ಲಿ ಮುಷ್ಕರ ನಡೆಸಿದ ಪರಿಣಾಮ ರಾಜ್ಯದೆಲ್ಲೆಡೆ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದು, ಖಾಸಗಿ ಬಸ್ಸುಗಳನ್ನು ಹತ್ತಲು ನೂಕುನುಗ್ಗಲು ನಡೆಸಿದರು. ಪರ್ಯಾಯವಾಗಿ ಸರಕಾರ ಖಾಸಗಿ ಬಸ್‍ಗಳು ಮುಕ್ತವಾಗಿ ಓಡಾಟ ನಡೆಸಲು ಅವಕಾಶ ಕಲ್ಪಿಸಿತ್ತು.

ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದೊಳಗೆ ಪೊಲೀಸ್ ಭದ್ರತೆಯೊಂದಿಗೆ ಖಾಸಗಿ ಬಸ್‍ಗಳ ನಿಲುಗಡೆಗೆ ಅನುಮತಿ ನೀಡಲಾಗಿದ್ದು, ಪ್ರಯಾಣಿಕರನ್ನು ಸಾಗಿಸಿದರು. ಮತ್ತೊಂದೆಡೆ ಮುಷ್ಕರದ ಮಾಹಿತಿ ಇರುವ ಕಾರಣ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿತ್ತು.

ಅದೇ ರೀತಿ, ಬಿಎಂಟಿಸಿ ಬಸ್ ಇಲ್ಲದ ಕಾರಣ ಮೆಟ್ರೊ ರೈಲುಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಆಟೋರಿಕ್ಷಾ, ಟ್ಯಾಕ್ಸಿಗಳಲ್ಲಿ ದುಬಾರಿ ದರ ನೀಡಿ ಪ್ರಯಾಣಿಕರು ತೆರಳಿದರು. ಇನ್ನು, ಬೆಂಗಳೂರು ಸೇರಿದಂತೆ ವಿವಿಧ ಮಾರ್ಗದಲ್ಲಿ ಸಂಚರಿಸುವ ಬಸ್ ನಿಲ್ದಾಣ ಜಾಗ ಖಾಲಿಯಾಗಿತ್ತು. ಬಸ್ ಚಾಲಕರು, ನಿರ್ವಾಹಕರಿಲ್ಲದೇ ನಿಲ್ದಾಣ ಬಣಗುಡುತ್ತಿತ್ತು.

ಬರುವ ಒಂದೊಂದೇ ಬಸ್‍ಗೆ ಪ್ರಯಾಣಿಕರು ಮುಗಿಬೀಳುತ್ತಿದ್ದರು. ಬಸ್‍ಗಾಗಿ ಪ್ರಯಾಣಿಕರು ಕಾದು ಕಾದು ಸುಸ್ತಾಗಿ, ಖಾಸಗಿ ವಾಹನಗಳ ಮೊರೆ ಹೋದರು. ಗಂಟೆಗಟ್ಟಲೆ ಕಾದ ಬಳಿಕ ಬಸ್‍ಗಳು ಬರುತ್ತಿದ್ದ ಕಾರಣ ಪ್ರಯಾಣಿಕರು ಬಸ್ ಹತ್ತಲು ನೂಕುನುಗ್ಗಲು ನಡೆಸುತ್ತಿದ್ದರು. ಈ ವೇಳೆ, ಸುರಕ್ಷಿತ ಅಂತರ ಕಣ್ಮರೆಯಾಗಿತ್ತು. ಕೊರೋನ ಸೋಂಕಿನ ಭಯವನ್ನು ಮರೆತು ಬಸ್ ಹತ್ತಲು ಪ್ರಯಾಣಿಕರು ಮುಗಿಬೀಳುವ ದೃಶ್ಯ ಅಲ್ಲಲ್ಲಿ ಕಂಡು ಬಂತು.

ಬಸ್‍ಗಳು ಯಾವ ಮಾರ್ಗದಲ್ಲಿ ಸಂಚರಿಸಬೇಕು, ದರ ಎಷ್ಟು ಪಡೆಯಬೇಕು ಎಂಬ ಪಟ್ಟಿಯನ್ನು ಸರಕಾರವೇ ನಿಗದಿ ಮಾಡಿದೆ. ಆದರೆ, ಅದಕ್ಕೂ ಹೆಚ್ಚು ದರ ಪಡೆಯಲಾಗುತ್ತಿದೆ ಎಂದು ಪ್ರಯಾಣಿಕರು ದೂರಿದರು.

ಬೆಂಗಳೂರು ಮಾತ್ರವಲ್ಲದೆ, ಬೆಳಗಾವಿ, ಮೈಸೂರು, ಹುಬ್ಬಳ್ಳಿ, ಧಾರವಾಡ, ಕಲಬುರ್ಗಿ, ಬಿಜಾಪುರ, ಚಿತ್ರದುರ್ಗ, ದಕ್ಷಿಣ ಕನ್ನಡ, ಹಾಸನ ಸೇರಿದಂತೆ ಭಾಗಶಃ ಮಾರ್ಗಗಳಲ್ಲಿ ಸರಕಾರಿ ಬಸ್‍ಗಳ ಸಂಚಾರವೇ ನಿಂತಿತ್ತು. ಕೆಲವು ಮಾರ್ಗಗಳಲ್ಲಿ ಖಾಸಗಿ ಬಸ್‍ಗಳನ್ನು ಓಡಿಸಲಾಯಿತು. ಆದರೆ, ಹಳ್ಳಿ ಹಳ್ಳಿಗಳಿಗೂ ಸಂಪರ್ಕ ಕಲ್ಪಿಸುವ ಸರಕಾರಿ ಸಾರಿಗೆ ಇಲ್ಲದೆ ಜನರು ತೊಂದರೆ ಅನುಭವಿಸಿದರು. ವಿಶೇಷವಾಗಿ ಶಾಲಾ–ಕಾಲೇಜುಗಳಿಗೆ ಬರುವುದಕ್ಕಾಗಿ ಸರಕಾರಿ ಬಸ್‍ಗಳನ್ನೇ ಅವಲಂಬಿಸಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಪರ್ಯಾಯ ವ್ಯವಸ್ಥೆಗೆ ಪರದಾಡಿದರು.

ವೈರಲ್: ಬೆಳಗಾವಿ ಬಸ್ ಘಟಕದ ಅಧಿಕಾರಿಗಳ ಸೂಚನೆ ಮೇರೆಗೆ ಕೆಲಸಕ್ಕೆ ಹಾಜರಾದ ಚಾಲಕರೊಬ್ಬರು ಹೆಲ್ಮೆಟ್ ಧರಿಸಿ ಬಸ್ ಓಡಿಸಿದ್ದು ಗಮನ ಸೆಳೆಯಿತು. ಅವರು ಸಮವಸ್ತ್ರ ಧರಿಸಿರಲಿಲ್ಲ. ಹೀಗಾಗಿ, ಅವರು ಸಾರಿಗೆ ನೌಕರರೋ ಅಲ್ಲವೋ ಎನ್ನುವ ಗೊಂದಲವೂ ಮೂಡಿತು. ಈ ದೃಶ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗೈರಾದ ನೌಕರರ ವೇತನ ಕಡಿತ

ಮುಷ್ಕರ ನಿರತ ನೌಕರರ ಮನವೊಲಿಕೆಗೆ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಸಾರಿಗೆ ನಿಗಮಗಳು ಈಗಾಗಲೇ ನಷ್ಟದಲ್ಲಿವೆ. ಆದರೂ ನೌಕರರು ಪ್ರತಿಭಟನೆ ಮುಂದುವರಿಸಿದ್ದಾರೆ. ಅವರು ಕೆಲಸಕ್ಕೆ ಹಾಜರಾಗಬೇಕು. ಕೆಲಸಕ್ಕೆ ಬರದಿದ್ದರೆ ಮಾರ್ಚ್ ತಿಂಗಳ ವೇತನ ಕಡಿತಗೊಳಿಸಲಾಗುವುದು. ಇನ್ನು ಬೆಂಗಳೂರಿನಲ್ಲಿ ಮುಷ್ಕರದ ಹಿನ್ನೆಲೆಯಲ್ಲಿ ಇಂದು ಕೇವಲ 135 ಬಿಎಂಟಿಸಿ ಬಸ್‍ಗಳು ಸಂಚಾರ ಮಾಡುತ್ತಿವೆ. ಖಾಸಗಿ ಬಸ್‍ಗಳ ಮೂಲಕ ಸಂಚಾರ ನಡೆದಿದೆ.

-ಶಿಖಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ

ಹೊಸ ಅಸ್ತ್ರ ಪ್ರಯೋಗಿಸಿದ ಅಧಿಕಾರಿ

ಕೊಪ್ಪಳದ ವಿಭಾಗೀಯ ಅಧಿಕಾರಿಗಳು, ಸಸ್ಪೆನ್ಷನ್ ರಿವೋಕ್(ಅಮಾನತು ರದ್ದತಿ) ಅಸ್ತ್ರ ಪ್ರಯೋಗಿಸಿ ಒಂದೊಂದೇ ಬಸ್‍ಗಳನ್ನು ರಸ್ತೆಗಿಳಿಸಿದರು. ವಿವಿಧ ಕಾರಣಗಳಿಗೆ ಅಮಾನತು ಆಗಿರುವ ಚಾಲಕರು, ನಿರ್ವಾಹಕರು ಹಾಗೂ ಚಾಲಕ ಕಂ ನಿರ್ವಾಹಕರ ಅಮಾನತು ಹಿಂಪಡೆದು ಕರ್ತವ್ಯಕ್ಕೆ ಕರೆಸಿದ್ದು, ಈ ಸಿಬ್ಬಂದಿ ಬಸ್‍ಗಳನ್ನು ನಿಲ್ದಾಣದಲ್ಲಿ ತಂದು ನಿಲ್ಲಿಸಿದ್ದು ವರದಿಯಾಗಿದೆ.

ಆಟೊರಿಕ್ಷಾ ದರ ಹೆಚ್ಚಳ

ಸಾರಿಗೆ ನೌಕರರ ಮುಷ್ಕರ ಪ್ರಯಾಣಿಕರ ಕೈ ಸುಡುತ್ತಿದ್ದು, ಬೆಂಗಳೂರಿನಲ್ಲಿ ಕನಿಷ್ಠ 25 ರೂಪಾಯಿ ಇದ್ದ ಆಟೊರಿಕ್ಷಾ ದರ ಬುಧವಾರ 100ರ ಗಡಿ ದಾಡಿದ್ದು, ಜನ ಸಂಕಷ್ಟಕ್ಕೆ ಸಿಲುಕಿದ್ದರು.

ಖಾಸಗಿ ಬಸ್‍ಗಳಿಗೆ ವಿನಾಯಿತಿ

ಸಾರಿಗೆ ಸಂಸ್ಥಗಳ ನೌಕರರು ಬುಧವಾರದಿಂದ ಅನಿರ್ದಿಷ್ಟ ಕಾಲ ಮುಷ್ಕರವನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ದಿನನಿತ್ಯ ಪ್ರಯಾಣಿಕರಿಗೆ ತೊಂದರೆಯಾಗದಂತೆ, ಖಾಸಗಿ ಬಸ್‍ಗಳಿಗೆ ಅಗತ್ಯವಿರುವ ರಹದಾರಿಯಿಂದ ವಿನಾಯಿತಿ ನೀಡಿ ರಾಜ್ಯ ಸರಕಾರ ಆದೇಶಿಸಿದೆ.

ಈ ಕುರಿತಂತೆ ಸಾರಿಗೆ ಇಲಾಖೆಯ ಸರಕಾದರ ಅಧೀನ ಕಾರ್ಯದರ್ಶಿ ಎಂ.ಸತ್ಯವತಿ ಅಧಿಸೂಚನೆ ಹೊರಡಿಸಿದ್ದು, ಸಾರಿಗೆ ಸಂಸ್ಥೆಗಳ ನೌಕರರು ಎ.7ರಿಂದ ಅನಿರ್ದಿಷ್ಟ ಕಾಲ ಮುಷ್ಕರವನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಉಂಟಾಗುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ಸಾರ್ವಜನಿಕರಿಗೆ ಸುಗಮ ಸಾರಿಗೆ ವ್ಯವಸ್ಥೆಯನ್ನು ಖಾಸಗಿ ಪ್ರಯಾಣಿಕರ ವಾಹನಗಳ ಮುಖಾಂತರ ಕಲ್ಪಿಸುವ ಸಂಬಂಧ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದರಿಂದಾಗಿ ಮೋಟಾರು ವಾಹನ ಕಾಯ್ದೆ 1988 ಸೆಕ್ಷನ್ 66(3)(ಎಫ್)ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮುಷ್ಕರದ ಅವಧಿಯಲ್ಲಿ ಪರ್ಯಾಯ ವ್ಯವಸ್ಥೆಯ ಭಾಗವಾಗಿ ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ ಒದಗಿಸುವ ಸಾರಿಗೆ ಪ್ರಯಾಣಿಕರ ವಾಹನಗಳಿಗೆ ಮೋಟಾರು ವಾಹನ ಕಾಯ್ದೆ 1988 ಸೆಕ್ಷನ್ 66(1)ರಂತೆ ಅಗತ್ಯವಿರುವ ರಹದಾರಿಯಿಂದ ವಿನಾಯಿತಿ ನೀಡಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಸಾರಿಗೆ ನೌಕರರು ಮುಷ್ಕರ ನಡೆಸಿದ ಪರಿಣಾಮ ರಾಜ್ಯದಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ ಸುಮಾರು 14 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.

ಬಿಎಂಟಿಸಿ ಪ್ರಸ್ತುತ ದಿನದ ಆದಾಯ ಸುಮಾರು 2.5ರಿಂದ 3 ಕೋಟಿಯಷ್ಟು ಇದ್ದರೆ, ಕೆಎಸ್ಸಾರ್ಟಿಸಿ ನಿತ್ಯದ ಆದಾಯ 7 ಕೋಟಿ, ವಾಯವ್ಯ ಸಾರಿಗೆಯದ್ದು 3.5 ಕೋಟಿ, ಈಶಾನ್ಯ ಸಾರಿಗೆ 3.5 ಕೋಟಿ ಆದಾಯವಿದೆ. ಇದೀಗ ಸಾರಿಗೆ ನೌಕರರ ಮುಷ್ಕರದಿಂದ ಕೋಟ್ಯಂತರ ರೂಪಾಯಿ ನಷ್ಟುವಾಗುತ್ತಿದೆ ಎಂದು ಸಾರಿಗೆ ಮೂಲಗಳು ತಿಳಿಸಿವೆ.

ಬಸ್ ದರ ಹೆಚ್ಚಳ

ದುಪ್ಪಟ್ಟು ಹಣ ವಸೂಲಿ ಮಾಡುತ್ತಿಲ್ಲ. ಮುಂದಿನ ಹಬ್ಬದ ದಿನಗಳಲ್ಲಿ ಬಸ್‍ಗಳ ಕೊರತೆ ಉಂಟಾದರೆ ಪ್ರಯಾಣ ದರ ಹೆಚ್ಚಿಸುತ್ತೇವೆ. 15 ದಿನದ ಹಿಂದೆ ಸಾರಿಗೆ ನೌಕರರು ಬಂದ್ ಮಾಡುವುದು ನಿಗದಿಯಾಗಿತ್ತು. ಮಾ.27ಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಎಲ್ಲಾ ಖಾಸಗಿ ಬಸ್ ಸಂಘಟನೆಗಳ ಜೊತೆ ಮಾತುಕತೆ ನಡೆಸಿದ್ದಾರೆ. ನಿನ್ನೆ ರಾತ್ರಿಯಿಂದ ಸುಮಾರು 500ಕ್ಕೂ ಹೆಚ್ಚು ಖಾಸಗಿ ಬಸ್‍ಗಳು ಸಾರ್ವಜನಿಕರ ಸೇವೆಗೆ ಕಾರ್ಯಾಚರಣೆ ನಡೆಸಿವೆ.

-ರಾಧಾಕೃಷ್ಣ ಹೊಳ್ಳ, ಖಾಸಗಿ ಟ್ರಾವೆಲ್ಸ್ ಮಾಲಕರ ಸಂಘದ ಅಧ್ಯಕ್ಷ

ಸರಕಾರ ಒಪ್ಪಿದರೆ ಮುಷ್ಕರ ಅಂತ್ಯ

ಆರನೇ ವೇತನ ಆಯೋಗದ ಶಿಫಾರಸುಗಳು ಜಾರಿಗೊಳಿಸಲು ರಾಜ್ಯ ಸರಕಾರ ಕೂಡಲೇ ಕ್ರಮ ಕೈಗೊಂಡರೆ ನಾವು ಒಂದೇ ಗಂಟೆಯಲ್ಲಿ ಮುಷ್ಕರ ಕೈ ಬಿಡುತ್ತೇವೆ. ಇಲ್ಲದಿದ್ದರೆ ಇಲ್ಲ. ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸಲೇಬೇಕು. ಗುರುವಾರ ಇನ್ನೂ ದೊಡ್ಡಮಟ್ಟದಲ್ಲಿ ಮುಷ್ಕರ ಆಗುತ್ತದೆ.

-ಆರ್.ಚಂದ್ರಶೇಖರ್, ಕೆಎಸ್ಸಾರ್ಟಿಸಿ ನೌಕರರ ಕೂಟದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News