ಇದ್ದ ಮನೆಗಳನ್ನು ಮಾರಾಟ ಮಾಡಿ ಬೇರೆ ಕಡೆಗಳಲ್ಲಿ ನೆಲೆಗಳನ್ನು ಕಂಡುಕೊಳ್ಳುತ್ತಿರುವ ಮುಸ್ಲಿಂ ಕುಟುಂಬಗಳು

Update: 2021-04-07 14:58 GMT

ಹೊಸದಿಲ್ಲಿ,ಎ.7: ಐವತ್ತಕ್ಕೂ ಅಧಿಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದ ಫೆಬ್ರವರಿ 2020ರ ದಂಗೆಗಳ ಬಳಿಕ ಈಶಾನ್ಯ ದಿಲ್ಲಿಯ ಕಿರಿದಾದ ಓಣಿಗಳಲ್ಲಿ ಪ್ರಮುಖ ಬದಲಾವಣೆಯೊಂದು ತೆರೆದುಕೊಳ್ಳುತ್ತಿದೆ. ಹೌದು,ಕಳೆದ ವರ್ಷದ ದಂಗೆಗಳಿಂದ ನಲುಗಿಹೋಗಿರುವ ಮುಸ್ಲಿಂ ಕುಟುಂಬಗಳು ಈ ಓಣಿಗಳಲ್ಲಿ ತಾವು ವರ್ಷಗಳಿಂದಲೂ ಬದುಕಿದ್ದ ಮನೆಗಳನ್ನು ಬಂದಷ್ಟು ಬೆಲೆಗೆ ಮಾರಾಟ ಮಾಡಿ ತಮ್ಮ ಪಾಲಿಗೆ ಸುರಕ್ಷಿತವೆನಿಸುವ ಇತರ ಕಡೆಗಳಲ್ಲಿ ನೆಲೆಗಳನ್ನು ಕಂಡುಕೊಳ್ಳುತ್ತಿದ್ದಾರೆ.

1984ರ ಸಿಖ್ ವಿರೋಧಿ ದಂಗೆಗಳ ನಂತರದ ಅತ್ಯಂತ ಭೀಕರ ಕೋಮುದಂಗೆಗಳು ಕಳೆದ ವರ್ಷ ಇದೇ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದವು. 53 ಜನರು ಕೊಲ್ಲಲ್ಪಟ್ಟು ಇತರ ಸಾವಿರಾರು ಜನರು ಗಾಯಗೊಂಡಿದ್ದರು ಅಥವಾ ನಿರ್ವಸಿತರಾಗಿದ್ದರು. ಕಡುಬಡವ ಕುಟುಂಬಗಳು ವಾಸವಿರುವ,ದ್ವಿಚಕ್ರ ವಾಹನಗಳು ಮಾತ್ರ ಸಾಗಬಹುದಾದ ಎರಡೂ ಕಡೆಗಳಲ್ಲಿ ಕೊಳಚೆ ನೀರಿನ ತೆರೆದ ಚರಂಡಿಗಳಿರುವ ಕಿರಿದಾದ ಓಣಿಗಳಿಂದ ಕೂಡಿರುವ ಶಿವಸಾಗರ ಬಡಾವಣೆಯ ಗಲಿ ನಂ.13ರ ಒಂದು ತುದಿಯಲ್ಲಿ ಹನುಮಾನ ಮಂದಿರವಿದ್ದರೆ ಇನ್ನೊಂದು ತುದಿಯಲ್ಲಿ ಮದೀನಾ ಮಸೀದಿಯಿದೆ. 

ದಂಗೆಕೋರರು ಮಸೀದಿಗೆ ಹಾನಿಯನ್ನುಂಟು ಮಾಡಿ ಅದರ ಸಮೀಪದಲ್ಲಿಯ ಮುಸ್ಲಿಂ ಕುಟುಂಬಗಳ ಮನೆಗಳನ್ನು ಸುಟ್ಟು ಹಾಕಿದ್ದರು ಅಥವಾ ಧ್ವಂಸಗೊಳಿಸಿದ್ದರು. ಈಗ ಒಂದು ವರ್ಷದ ಬಳಿಕ ಇಂತಹ ಓಣಿಗಳಲ್ಲಿಯ ಹೆಚ್ಚಿನ ಮುಸ್ಲಿಂ ಕುಟುಂಬಗಳು ತಮ್ಮ ಮನೆಗಳನ್ನು ಮಾರಾಟ ಮಾಡಿ ಅದೇ ಶಿವಸಾಗರ ಬಡಾವಣೆಯಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ. ಕೆಲವೇ ಮುಸ್ಲಿಂ ಕುಟುಂಬಗಳು ಈಗ ಈ ಓಣಿಗಳಲ್ಲಿದ್ದು,ಅವರೂ ಸಿಕ್ಕಿದಷ್ಟು ಬೆಲೆಗೆ ಮನೆಗಳನ್ನು ಮಾರಾಟ ಮಾಡುವ ತರಾತುರಿಯಲ್ಲಿದ್ದಾರೆ ಎಂದು ಎನ್ಜಿಒ ಲ್ಯಾಂಡ್ ಕಾನ್ಫ್ಲಿಕ್ಟ್ ವಾಚ್ ನಡೆಸಿರುವ ಅಧ್ಯಯನವು ಬೆಟ್ಟು ಮಾಡಿದೆ.

ಮುಸ್ಲಿಂ ಕುಟುಂಬಗಳು ಮಾರುಕಟ್ಟೆ ಬೆಲೆಗಳಿಗಿಂತ ಶೇ.25ರಷ್ಟು ಅಗ್ಗದ ದರಗಳಲ್ಲಿ ತಮ್ಮ ಮನೆಗಳನ್ನು ಮಾರಾಟ ಮಾಡಿವೆ. ಆಸ್ತಿ ಮಾರಾಟದ ಏಜೆಂಟರೂ ಮುಸ್ಲಿಂ ಕುಟುಂಬಗಳಿಂದ ಮನೆಗಳ ಮಾರಾಟವನ್ನು ಉತ್ತೇಜಿಸುತ್ತಿದ್ದಾರೆ. ಈಗ ಈಶಾನ್ಯ ದಿಲ್ಲಿಯಲ್ಲಿ ಮುಸ್ಲಿಮರು ಮತ್ತು ಹಿಂದುಗಳು ಬಹುಸಂಖ್ಯಾಕರಾಗಿರುವ ಪ್ರತ್ಯೇಕ ವಾಸಸ್ಥಳಗಳು ಹುಟ್ಟಿಕೊಳ್ಳುತ್ತಿವೆ.

ದಿಲ್ಲಿಯ ಬಡಾವಣೆಗಳಲ್ಲಿ ಮುಸ್ಲಿಮರು ಮತ್ತು ಹಿಂದುಗಳ ವಾಸಸ್ಥಳಗಳ ಇಂತಹ ಪ್ರತ್ಯೇಕತೆಯು ಭವಿಷ್ಯದಲ್ಲಿ ಒನ್ನಷ್ಟು ಹಿಂಸೆಗೆ ಕಾರಣವಾಗಬಹುದು ಎಂದು ವಿಶ್ವಾದ್ಯಂತದ ಅಧ್ಯಯನಗಳು ತೋರಿಸಿವೆ.

ಮಿಶ್ರ ಸಮುದಾಯಗಳ ಕಾಲನಿಗಳಲ್ಲಿ ವಾಸವಿರುವವರೆಗೆ ಪರಸ್ಪರ ಬೆರೆಯಲು ಹೆಚ್ಚಿನ ಅವಕಾಶಗಳಿರುತ್ತವೆ ಎಂದು ಹೇಳಿದ ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್ನ ಹರ್ಷ ಮಂದರ್ ಅವರು,ಈಗ ಮುಂದಿನ ಪೀಳಿಗೆಯು ಇತರ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ತಮ್ಮ ಸ್ನೇಹಿತ ಎಂದು ಕರೆಯಲೂ ಅವಕಾಶ ಸಿಗದು ಮತ್ತು ಇದು ದ್ವೇಷ ಹುಟ್ಟುಹಾಕುವುದನ್ನು ಸುಲಭವಾಗಿಸುತ್ತದೆ ಎಂದು ಕಳವಳವನ್ನು ವ್ಯಕ್ತಪಡಿಸಿದರು.
 
ಗುಜರಾತ್ ದಂಗೆಗಳ ಬಳಿಕ ಸಂತ್ರಸ್ತರಿಂದ ಆಸ್ತಿಗಳ ಹತಾಶ ಮಾರಾಟವನ್ನು ತಡೆಯಲು ಅಥವಾ ನಿರ್ಬಂಧಿಸಲು ನ್ಯಾಯಾಲಯಗಳು ಹಸ್ತಕ್ಷೇಪ ನಡೆಸಿದ್ದವು. ಇದು ಮಿಶ್ರಫಲಗಳನ್ನು ನೀಡಿತ್ತಾದರೂ ಹತಾಶ ಮಾರಾಟಗಳನ್ನು ತಗ್ಗಿಸಿತ್ತು ಎನ್ನುತ್ತಾರೆ ನಾಗರಿಕ ಹಕ್ಕುಗಳ ಕಾರ್ಯಕರ್ತೆ ಹಾಗೂ ಎನ್ಜಿಒ ಸಿಟಿಝನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್ನ ಕಾರ್ಯದರ್ಶಿ ಟೀಸ್ತಾ ಸೆಟ್ಲವಾಡ್.

ದಿಲ್ಲಿ ಸರಕಾರವಾಗಲಿ,ಕೇಂದ್ರ ಸರಕಾರವಾಗಲಿ ಈಶಾನ್ಯ ದಿಲ್ಲಿಯಲ್ಲಿ ಸಂತ್ರಸ್ತರಿಂದ ಆಸ್ತಿಗಳ ಮಾರಾಟವನ್ನು ಮತ್ತು ಸಮುದಾಯಗಳ ನಡುವಿನ ಪ್ರತ್ಯೇಕತೆಗಳನ್ನು ತಡೆಯಲು ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ. ಸರಕಾರಗಳು ಹಸ್ತಕ್ಷೇಪ ನಡೆಸದಿದ್ದರೆ ಈಶಾನ್ಯ ದಿಲ್ಲಿಯ ಜನಸಂಖ್ಯಾ ಸ್ವರೂಪದಲ್ಲಿ ಶಾಶ್ವತ ಬದಲಾವಣೆಗಳಾಗುತ್ತವೆ ಮತ್ತು ಇವು ಭವಿಷ್ಯದಲ್ಲಿ ಪ್ರದೇಶವನ್ನು ಇನ್ನಷ್ಟು ದಂಗೆಗಳಿಗೆ ಸುಲಭಭೇದ್ಯವನ್ನಾಗಿಸುತ್ತವೆ.

ಸಂತ್ರಸ್ತ ಮುಸ್ಲಿಂ ಕುಟುಂಬಗಳಿಂದ ಮನೆಗಳ ಮಾರಾಟದಿಂದ ಏಜೆಂಟರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಮುಸ್ಲಿಮರು ಹೆಚ್ಚಾಗಿ ವಾಸವಿರುವ ಕಡೆಗಳಿಗೆ ಸ್ಥಳಾಂತರಗೊಳ್ಳಿ,ಇಲ್ಲಿದ್ದು ಅಪಾಯವನ್ನು ಎದುರಿಸುವುದು ಬೇಡ ಎಂದು ಅವರನ್ನು ಉತ್ತೇಜಿಸುತ್ತಿದ್ದಾರೆ. ಇದರಲ್ಲಿ ಏಜೆಂಟರ ಸ್ವಾರ್ಥಸಾಧನೆಯೂ ಸೇರಿದೆ.
ಮುಸ್ಲಿಂ ಕುಟುಂಬಗಳು ಮನೆಗಳನ್ನು ಮಾರಾಟ ಮಾಡಲು ಮುಸ್ಲಿಂ ಖರೀದಿದಾರರಿಗೇ ಕಾಯುತ್ತ ಕುಳಿತಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಎಲ್ಲ ಖರೀದಿದಾರರು ಹಿಂದುಗಳೇ ಆಗಿದ್ದಾರೆ. ಮುಸ್ಲಿಮರು ತಮ್ಮ ಮನೆಗಳನ್ನು ಹಿಂದುಗಳಿಗೇ ಮಾರಾಟ ಮಾಡುವುದು ಒಳ್ಳೆಯದು. ಇನ್ನೊಂದು ಮುಸ್ಲಿಂ ಕುಟುಂಬವನ್ನು ಈ ಕಾಡಿನೊಳಕ್ಕೆ ಏಕೆ ಸಿಲುಕಿಸಬೇಕು ಎಂದು ಸ್ಥಳೀಯ ನಿವಾಸಿಯೋರ್ವರು ಹೇಳಿದರು.

ಇದೇ ವೇಳೆ ಈ ಓಣಿಗಳಲ್ಲಿ ವಾಸವಿರುವ ಯಾವುದೇ ಹಿಂದು ಕುಟುಂಬವು ತನ್ನ ಮನೆಯನ್ನು ಮಾರಾಟ ಮಾಡಿಲ್ಲ. ದಂಗೆಗಳ ಬಳಿಕ ತಮ್ಮ ಹಿಂದು ನೆರೆಕರೆಯವರು ತಮಗೆ ನಿರಂತರ ಕಿರುಕುಳಗಳನ್ನು ನೀಡುತ್ತಿದ್ದಾರೆ, ಹೀಗಾಗಿ ತಮಗೆ ಇಲ್ಲಿಯ ಮನೆಗಳನ್ನು ಮಾರಾಟ ಮಾಡಿ ಮುಸ್ಲಿಮರೇ ಹೆಚ್ಚಾಗಿರುವ ಕಡೆಗಳಿಗೆ ಸ್ಥಳಾಂತರಗೊಳ್ಳುವುದು ಬಿಟ್ಟರೆ ಅನ್ಯಮಾರ್ಗವಿಲ್ಲ ಎನ್ನುವುದು ಇಲ್ಲಿಯ ಮುಸ್ಲಿಂ ನಿವಾಸಿಗಳ ಅಭಿಪ್ರಾಯವಾಗಿದೆ ಎನ್ನುತ್ತಾರೆ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸ್ಟಡೀಸ್ ಟ್ರಸ್ಟ್ ನ ಅಷ್ಮೀತ್ ಕುಮಾರ್.

ದಂಗೆಗಳು ಮಾತ್ರವಲ್ಲ, ದಂಗೆಗಳ ಭೀತಿಯೂ ಮುಸ್ಲಿಮರು ಪ್ರತ್ಯೇಕವಾಗಿ ವಾಸವಾಗುವುದಕ್ಕೆ ಕಾರಣವಾಗಿದೆ. ರಿಯಲ್ಎಸ್ಟೇಟ್ ಎಜೆಂಟಗಳಲ್ಲದೆ ಸ್ಥಳೀಯ ಪ್ರಬಲರೂ ಮುಸ್ಲಿಂ ಕುಟುಂಬಗಳ ಈ ಭೀತಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ದಿಲ್ಲಿ ದಂಗೆಗಳ ಹಲವು ಆರೋಪಿಗಳ ಪರ ವಕಾಲತ್ ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಮೆಹಮೂದ್ ಪ್ರಾಚಾ ಹೇಳಿದರು.

ಕೋಮು ಹಿಂಸೆಗಳ ಹಿಂದಿನ ಅಥವಾ ದಂಗೆಗಳ ರೂವಾರಿಗಳ ಉದ್ದೇಶವೇ ಇತರ ಸಮುದಾಯದವರನ್ನು ತಮ್ಮ ಕೇರಿಗಳಿಂದ ಹೊರಗಟ್ಟುವುದಾಗಿದೆ ಎಂದು ಸೆಟ್ಲವಾಡ್ ಹೇಳಿದರು.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News