ಮಹಾರಾಷ್ಟ್ರದಲ್ಲಿ ಕೊರೋನ ಲಸಿಕೆಯ ಕೊರತೆ: ಪುಣೆ, ಸತಾರ, ಪನ್ವೇಲ್ ಕೇಂದ್ರಗಳು ಬಂದ್

Update: 2021-04-08 06:03 GMT

ಮುಂಬೈ: ಡೋಸೇಜ್ ಲಭ್ಯವಿಲ್ಲದ ಕಾರಣ ಬುಧವಾರ ಸಂಜೆಯಿಂದ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಲಸಿಕೆ ನೀಡುವುದನ್ನು ನಿಲ್ಲಿಸಲಾಗಿದೆ. ಪುಣೆ, ಸತಾರ, ಪನ್ವೇಲ್ ಜಿಲ್ಲೆಗಳಲ್ಲಿರುವ ಲಸಿಕಾ ಕೇಂದ್ರಗಳ ಬಾಗಿಲು ಮುಚ್ಚಲಾಗಿದೆ.

ಸತಾರದಲ್ಲಿ ಈ ತನಕ 45 ವರ್ಷಕ್ಕಿಂತ ಮೇಲ್ಮಟ್ಟ ಸುಮಾರು 2.6 ಲಕ್ಷ ಜನರು ತಲಾ ಒಂದು ಡೋಸ್ ಗಳನ್ನು ಪಡೆದಿದ್ದಾರೆ.ಕೆಲವು ಅಧಿಕಾರಿಗಳಿಗೂ ಡೋಸ್ ಲಭಿಸಿಲ್ಲ ಎಂದು ಸತಾರ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್ ಗೌಡ್ ತಿಳಿಸಿದ್ದಾರೆ. 

ಕೋವಿಡ್-19 ಲಸಿಕೆಗಳು ಲಭ್ಯವಿರದ ಕಾರಣ ಪನ್ವೇಲ್ ನಲ್ಲಿ ಲಸಿಕೆ ನೀಡುವುದನ್ನು ನಿಲ್ಲಿಸಲಾಗಿದೆ.

ಕೋವಿಡ್-19 ಲಸಿಕೆಗಳು ಲಭ್ಯವಿಲ್ಲದ ಕಾರಣ ಪನ್ವೇಲ್ ನ ಎಲ್ಲ ಸರಕಾರಿ ಹಾಗೂ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಿಕೆ ಅಭಿಯಾನವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಲಸಿಕೆಗಳು ಮತ್ತೆ ಸಂಗ್ರಹವಾದ ಬಳಿಕ ಕೇಂದ್ರಗಳನ್ನು ಮತ್ತೆ ತೆರೆಯಲಾಗುವುದು ಎಂದು ಪನ್ವೇಲ್ ಮಹಾನಗರ ಪಾಲಿಕೆ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಲಸಿಕೆಯ ಕೊರತೆಯಿಂದಾಗಿ ಪುಣೆಯಲ್ಲಿ 100ಕ್ಕೂ ಅಧಿಕ ಲಸಿಕಾ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ಎನ್ ಸಿಪಿ ನಾಯಕಿ ಸುಪ್ರಿಯಾ ಸುಳೆ ಕಳೆದ ರಾತ್ರಿ ಟ್ವೀಟಿಸಿದ್ದಾರೆ.

ಪುಣೆ ಜಿಲ್ಲೆಯ 391 ಲಸಿಕಾ ಕೇಂದ್ರಗಳಲ್ಲಿ ಇಂದು 55,539 ಮಂದಿಗೆ ಲಸಿಕೆ ನೀಡಲಾಗಿದೆ.ಲಸಿಕೆಗಳ ದಾಸ್ತಾನು ಖಾಲಿಯಾದ ಕಾರಣ ಹಲವು ಸಾವಿರ ಜನರು ಲಸಿಕೆ ಹಾಕಲಾಗದೆ ವಾಪಸಾದರು. 109 ಕೇಂದ್ರಗಳು ಲಸಿಕೆಗಳ ಸಂಗ್ರಹವಿಲ್ಲದ ಕಾರಣ ಮುಚ್ಚಲ್ಪಟ್ಟವು. ಸ್ಟಾಕ್ ಕೊರತೆಯ ಕಾರಣ ನಮ್ಮ ಆವೇಗವನ್ನು ಕಳೆದುಕೊಳ್ಳಬಹುದು. ಜೀವಗಳನ್ನು ಉಳಿಸಲು, ಸೋಂಕಿನ ಸರಪಳಿಯನ್ನು ಮರಿಯಲು ಹಾಗೂ ನಮ್ಮ ಆರ್ಥಿಕತೆಯನ್ನುಮರಳಿ ಪಡೆಯಲು ಪ್ರತಿಯೊಬ್ಬ ವ್ಯಕ್ತಿಗೆ ಲಸಿಕೆ ನೀಡಲು ನಾವು ದೃಢವಾಗಿ ನಿಶ್ಚಯಿಸಿದ್ದೇವೆ. ಕೋವಿಡ್-19 ಲಸಿಕೆಗಳನ್ನು ಪೂರೈಸುವುದರೊಂದಿಗೆ ನಮಗೆ ನೆರವಾಗಬೇಕೆಂದು ಗೌರವಾನ್ವಿತ ಹರ್ಷವರ್ಧನ್ ಅವರಿಗೆ ವಿನಂತಿಸುತ್ತೇನೆ  ಎಂದು ಸುಪ್ರಿಯಾ ಟ್ವೀಟಿಸಿದ್ದಾರೆ. 

ದೇಶದಲ್ಲಿ ಅತಿ ಹೆಚ್ಚು ದೈನಂದಿನ ಕೊರೋನ ಪ್ರಕರಣಗಳು ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಬುಧವಾರ ಇಲ್ಲಿ 24 ಗಂಟೆಗಳಲ್ಲಿ 59,907 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ಒಟ್ಟು 322 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಲಸಿಕೆಗಳ ದಾಸ್ತಾನು ವೇಗವಾಗಿ ಖಾಲಿಯಾಗುತ್ತಿದ್ದು, ಇನ್ನು 3 ದಿನಗಳಲ್ಲಿ ಲಸಿಕೆ ಕೊರತೆ ಎದುರಾಗಲಿದೆ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಬುಧವಾರ ಕೇಂದ್ರ ಸರಕಾರಕ್ಕೆ ಎಚ್ಚರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News