ಜಮ್ಮುವಿನಲ್ಲಿರುವ ರೋಹಿಂಗ್ಯನ್ನರನ್ನು ಮ್ಯಾನ್ಮಾರ್ ಗೆ ವಾಪಸ್ ಕಳುಹಿಸಲು ಸುಪ್ರೀಂ ಕೋರ್ಟ್ ಅನುಮತಿ

Update: 2021-04-08 10:46 GMT

ಹೊಸದಿಲ್ಲಿ: ಜಮ್ಮುವಿನಲ್ಲಿ ರೋಹಿಂಗ್ಯ ನಿರಾಶ್ರಿತರ ದಿಗ್ಬಂಧನವನ್ನು ಹಾಗೂ ಅವರನ್ನು ಅವರ ತವರು ದೇಶವಾದ ಮ್ಯಾನ್ಮಾರ್‍ಗೆ ವಾಪಸ್ ಕಳುಹಿಸುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅಪೀಲನ್ನು  ಮನ್ನಿಸಲು ಇಂದು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜಮ್ಮುವಿನ ದಿಗ್ಬಂಧನ ಕೇಂದ್ರಗಳಲ್ಲಿರುವ 150 ರೊಹಿಂಗ್ಯನ್ನರ ಬಿಡುಗಡೆಗೆ ನಿರಾಕರಿಸಿದ ನ್ಯಾಯಾಲಯ ಕಾನೂನಿನ ಪ್ರಕಾರ ಅವರ ಮಾತೃ ದೇಶಕ್ಕೆ ಅವರನ್ನು ಕಳುಹಿಸಲು ಅನುಮತಿಸಿದೆ.

"ಮಧ್ಯಂತರ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಆದರೆ ಜಮ್ಮುವಿನಲ್ಲಿರುವ ರೊಹಿಂಗ್ಯನ್ನರ ಗಡೀಪಾರಿಗೆ ಸಂಬಂಧಿಸಿದ  ನಿಗದಿತ ಪ್ರಕ್ರಿಯೆಗಳನ್ನು ಅನುಸರಿಸದ  ಹೊರತು  ಅವರನ್ನು ಅವರ ದೇಶಕ್ಕೆ ಕಳುಹಿಸಬಾರದು" ಎಂದು ನ್ಯಾಯಾಲಯ ಹೇಳಿದೆ.

ರೊಹಿಂಗ್ಯನ್ನರ ಪರವಾಗಿ ಮೊಹಮ್ಮದ್ ಸಲೀಮುಲ್ಲಾ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅಪೀಲಿನ ಮೇಲಿನ ವಿಚಾರಣೆ ನಡೆಸಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಹಾಗೂ ವಿ ರಾಮಸುಬ್ರಮಣಿಯನ್ ಅವರ ಪೀಠ  ಮೇಲಿನ ಆದೇಶ ಹೊರಡಿಸಿದೆ.

ಮ್ಯಾನ್ಮಾರ್‍ನಲ್ಲಿ ಈಗ ಮಿಲಿಟರಿ ಆಡಳಿತವಿರುವುದರಿಂದ ಈ ಹಿಂದೆ ನಾಗರಿಕ ಸರಕಾರವಿರುವಾಗಲೂ ಸೇನೆಯಿಂದ ದೌರ್ಜನ್ಯವೆದುರಿಸಿದ್ದ ರೋಹಿಂಗ್ಯನ್ನರನ್ನು ಈಗ ವಾಪಸ್ ಕಳುಹಿಸಿದರೆ ಅವರಿಗೆ ಅಪಾಯವುಂಟಾಗಬಹುದು ಎಂದು ಮಾರ್ಚ್ 23ರಂದು ನಡೆದ ವಿಚಾರಣೆ ವೇಳೆ ಅಪೀಲುದಾರರ ಪರ ವಕೀಲ  ಪ್ರಶಾಂತ್ ಭೂಷಣ್ ಹೇಳಿದ್ದರಲ್ಲದೆ ರೊಹಿಂಗ್ಯನ್ನರು ತಮ್ಮ ದೇಶದಲ್ಲಿ ನರಮೇಧದ ಬೆದರಿಕೆ ಎದುರಿಸುತ್ತಿರುವ ಕುರಿತಂತೆ ಕಳೆದ ವರ್ಷದ ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶವನ್ನೂ ಉಲ್ಲೇಖಿಸಿದ್ದರು.

ಆದರೆ ಅಪೀಲನ್ನು ವಿರೋಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅಸ್ಸಾಂನಲ್ಲಿ ರೋಹಿಂಗ್ಯನ್ನರಿಗೆ ಸಂಬಂಧಿಸಿದ ಇಂತಹುದೇ ಅಪೀಲನ್ನು  2018ರಲ್ಲಿ ತಿರಸ್ಕರಿಸಲಾಗಿತ್ತು ಎಂಬುದನ್ನು ಅಪೀಲುದಾರರು ಉಲ್ಲೇಖಿಸಿಲ್ಲ ಎಂದರು. ಮೇಲಾಗಿ ರೊಹಿಂಗ್ಯನ್ನರನ್ನು ನಿರಾಶ್ರಿತರೆಂದು ಹೇಳಬಾರದು ಅವರು ಅಕ್ರಮ ವಲಸಿಗರು ಎಂದೂ ಮೆಹ್ತಾ ಹೇಳಿದರಲ್ಲದೆ ಜಗತ್ತಿನ ಅಕ್ರಮ ವಲಸಿಗರಿಗೆ ಭಾರತ ರಾಜಧಾನಿಯಾಗಲು ಸಾಧ್ಯವಿಲ್ಲ ಎಂದರು.

ವಿಚಾರಣೆ ವೇಳೆ  ತಮ್ಮ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ ಸಿಜೆಐ ಬೊಬ್ಡೆ, "ಅವರು ಮ್ಯಾನ್ಮಾರ್‍ಗೆ ಮರಳಿದರೆ ಅವರ ಹತ್ಯೆ ನಡೆಯಬಹುದೆಂಬ ಭಯವಿದೆ, ಆದರೆ ಅದೆಲ್ಲಾ ನಮ್ಮ ನಿಯಂತ್ರಣದಲ್ಲಿಲ್ಲ. ಆದರೆ ಭೂಮಿಯಲ್ಲಿ ನರಮೇಧ ಇರಬಾರದು ಎಂಬುದು ನಮ್ಮ ಇಚ್ಛೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News