ಲಸಿಕೆ ಪಡೆದಿದ್ದ ಆರೆಸ್ಸೆಸ್‍ ಮುಖ್ಯಸ್ಥ ಮೋಹನ್ ಭಾಗ್ವತ್‌ಗೆ ಕೋವಿಡ್ ಪಾಸಿಟಿವ್

Update: 2021-04-10 17:44 GMT

ನಾಗ್ಪುರ (ಮಹಾರಾಷ್ಟ್ರ),ಎ.10: ಆರೆಸ್ಸೆಸ್ ವರಿಷ್ಠ ಮೋಹನ ಭಾಗವತ್ ಅವರು ಕೊರೋನವೈರಸ್ ಸೋಂಕಿಗೊಳಗಾಗಿರುವುದು ದೃಢಪಟ್ಟಿದೆ. ಭಾಗವತ್ ಅವರಲ್ಲಿ ಸೋಂಕಿನ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಂಡಿದ್ದವು ಮತ್ತು ಅವರನ್ನು ನಾಗ್ಪುರದ ಕಿಂಗ್ಸ್‌ವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೆಸ್ಸೆಸ್ ಟ್ವೀಟಿಸಿದೆ.

ನಾಗ್ಪುರ್ ಕೊರೋನವೈರಸ್‌ನಿಂದ ತೀವ್ರ ಬಾಧಿತ ಜಿಲ್ಲೆಗಳಲ್ಲೊಂದಾಗಿದ್ದು ಮಹಾರಾಷ್ಟ್ರದಲ್ಲಿ ಪುಣೆ ಮತ್ತು ಮುಂಬೈ ಜೊತೆಗೆ ಈ ಜಿಲ್ಲೆಯಲ್ಲಿಯೂ ಅತ್ಯಧಿಕ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಶುಕ್ರವಾರ ಜಿಲ್ಲೆಯಲ್ಲಿ 6,489 ಹೊಸ ಪ್ರಕರಣಗಳು ಮತ್ತು 64 ಸಾವುಗಳು ದಾಖಲಾಗಿದ್ದವು.

ತನ್ಮಧ್ಯೆ ಮಹಾರಾಷ್ಟ್ರದಲ್ಲಿ ಪ್ರಕರಣಗಳ ಏರಿಕೆಯ ನಡುವೆಯೇ ರಾಜ್ಯದ ಆರೋಗ್ಯ ಸಚಿವ ರಾಜೇಶ್ ಟೋಪೆ ಹಾಗೂ ಪರಿಹಾರ ಮತ್ತು ಪುನರ್ವಸತಿ ಸಚಿವ ವಿಜಯ ವಡೆಟ್ಟಿವಾರ್ ಅವರು,ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಹೋದರೆ ಸಂಪೂರ್ಣ ಲಾಕ್‌ಡೌನ್ ಅನ್ನು ಜಾರಿಗೊಳಿಸಬಹುದು ಎಂದು ಹೇಳಿದ್ದಾರೆ.

ಶನಿವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 1,45,384 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಈರೆಗಿನ ಒಟ್ಟು ಪ್ರಕರಣಗಳ ಸಂಖ್ಯೆ 1,32,05,926ಕ್ಕೇರಿದೆ. ಈ ಅವಧಿಯಲ್ಲಿ 794 ಸಾವುಗಳು ವರದಿಯಾಗಿದ್ದು,ಒಟ್ಟು ಸಾವುಗಳ ಸಂಖ್ಯೆ 1,68,436ಕ್ಕೆ ತಲುಪಿದೆ. ದೇಶದಲ್ಲಿ 10,46,631 ಸಕ್ರಿಯ ಪ್ರಕರಣಗಳಿದ್ದು,ಇದು ಕೊರೋನವೈರಸ್ ಸಾಂಕ್ರಾಮಿಕ ಸ್ಫೋಟಗೊಂಡಾಗಿನಿಂದ ಗರಿಷ್ಠ ಸಂಖ್ಯೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News