ಉದ್ಧಟತನ ಮುಂದುವರಿಸಿದರೆ ಕರ್ನಾಟಕ ಬಿಜೆಪಿ ಮುಕ್ತ ಆಗುವ ದಿನಗಳು ದೂರವಿಲ್ಲ: ಕುಮಾರಸ್ವಾಮಿ

Update: 2021-04-10 12:28 GMT

ಬೀದರ್, ಎ. 10: `ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ ನಾಲ್ಕನೆ ದಿನಕ್ಕೆ ಕಾಲಿಟ್ಟರೂ ಅವರನ್ನು ಮಾತುಕತೆಗೆ ಕರೆಯುವುದಿಲ್ಲ ಎಂದರೆ ಇವರು ವಿಧಾನಸೌಧದಲ್ಲಿ ಇರುವುದು ಏಕೆ? ರಾಜ್ಯದ ಖಜಾನೆ ಖಾಲಿಯಾಗಿಲ್ಲ, ಬದಲಿಗೆ ಇವರೇ ಖಜಾನೆ ಖಾಲಿ ಮಾಡುತ್ತಿದ್ದಾರೆ. ಇದೇ ರೀತಿ ನಿಮ್ಮ ಉದ್ಧಟತನ ಮುಂದುವರಿಸಿದರೆ ಕರ್ನಾಟಕ ಬಿಜೆಪಿ ಮುಕ್ತ ಆಗುವ ದಿನಗಳು ದೂರವಿಲ್ಲ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಉದ್ಧಟತನ ಬಿಟ್ಟು ಸಾರಿಗೆ ನೌಕರರ ಮನವೊಲಿಸಬೇಕು. ಸಿಎಂ ಆಗಲಿ, ಸಚಿವರಾಗಿ ಯಾರು ಮೇಲಿಂದ ಇಳಿದು ಬಂದಿಲ್ಲ. ಯಾರಿಗೂ ಅಧಿಕಾರ ಶಾಶ್ವತವಲ್ಲ. ಇವರ ಉದ್ಧಟತನದ ನಡವಳಿಕೆಯಿಂದ ಮುಂದೆ ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡಬೇಡಿ' ಎಂದು ಕೋರಿದರು.

ರಾಜ್ಯ ರಸ್ತೆ ಸಾರಿಗೆ ನೌಕರರ ಮನವೊಲಿಸಿ, ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲಗಳನ್ನು ತಪ್ಪಿಸಬೇಕಿರುವುದು ಸರಕಾರದ ಜವಾಬ್ದಾರಿ. ಈ ಉದ್ಧಟತನ ಬಿಟ್ಟು ಸಿಎಂ ಯಡಿಯೂರಪ್ಪ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಮೊದಲು ಸಾರಿಗೆ ನೌಕರ ಸಮಸ್ಯೆ ಬಗೆಹರಿಸುವ ಕಡೆ ಗಮನಹರಿಸಬೇಕು. ರಾಜ್ಯದಲ್ಲಿ ಸಾರಿಗೆ ಸಮಸ್ಯೆ ಹಿನ್ನೆಲೆಯಲ್ಲಿ ಸಾಮಾನ್ಯ ಜನತೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನೈಟ್ ಕರ್ಫ್ಯೂಗೆ ಆಕ್ಷೇಪ: ಕೊರೋನ ಸೋಂಕು ತಡೆಗಟ್ಟಲು ರಾಜ್ಯದ ಏಳು ಜಿಲ್ಲೆಯ 8 ನಗರಗಳಲ್ಲಿ ನೈಟ್ ಕರ್ಫ್ಯೂ ಹೇರಿದ್ದು ಅದು ಕೊರೋನ ನಿಯಂತ್ರಣಕ್ಕೆ ಎಷ್ಟರ ಮಟ್ಟಿಗೆ ಅನುಕೂಲ ಆಗುತ್ತದೆಯೋ ಗೊತ್ತಿಲ್ಲ. ರಾತ್ರಿ ಕರ್ಫ್ಯೂ ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎಂಬುದನ್ನು ಕಾದುನೋಡಬೇಕು. ಕೊರೋನ ನಿಯಂತ್ರಣಕ್ಕೆ ಮಾರ್ಗಸೂಚಿ ಪಾಲಿಸಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News