ಕರ್ನಾಟಕದಲ್ಲಿ ಜಿಎಸ್ಟಿ ಜೊತೆ 'ವಿಜಯೇಂದ್ರ ಟ್ಯಾಕ್ಸ್' ಕೂಡಾ ಇದೆ: ಸಿಎಂ ಪುತ್ರನ ವಿರುದ್ಧ ಸುರ್ಜೇವಾಲಾ ವಾಗ್ದಾಳಿ

Update: 2021-04-10 16:35 GMT

ಬೆಳಗಾವಿ, ಎ. 10: `ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸರಕಾರ ನಡೆಸುವುದು ಗೊತ್ತಿಲ್ಲ. ಅವರಿಗೇನಿದ್ದರೂ ಭ್ರಷ್ಟಾಚಾರ ನಡೆಸುವುದೊಂದೆ ಗೊತ್ತಿದೆ. ಹೀಗಾಗಿಯೇ ಮುಖ್ಯಮಂತ್ರಿ ಮತ್ತು ಗ್ರಾಮೀಣಾಭೀವೃದ್ಧಿ ಸಚಿವರ ಮಧ್ಯೆದ ಕಿತ್ತಾಟ ಬಹಿರಂಗಗೊಂಡಿದೆ' ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಶನಿವಾರ ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯೂಡಿಯೂರಪ್ಪ ಸರಕಾರ ಭ್ರಷ್ಟಾಚಾರದಲ್ಲಿ ನಂಬರ್ ಒನ್. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಈ ಸರಕಾರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಗಮನ ನೀಡುತ್ತಿಲ್ಲ. ಜಿಎಸ್ಟಿ ಬಗ್ಗೆ ನಮಗೆ ಗೊತ್ತಿದೆ. ಆದರೆ, ಕರ್ನಾಟಕದಲ್ಲಿ ವಿಜಯೇಂದ್ರ ಟ್ಯಾಕ್ಸ್ ಎಂಬುವುದು ಇದೆ. ಇವರಿಗೂ ತೆರಿಗೆ ನೀಡುವ ಪರಿಸ್ಥಿತಿ ಇದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಸುಸ್ಥಿತಿಯಲ್ಲಿತ್ತು. ಆದರೆ, ಬಿಜೆಪಿ ಗೃಹ ಸಚಿವರು ಅವರ ಉನ್ನತ ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿಲ್ಲ. ಅವರು ಬೆಕ್ಕು-ನಾಯಿಯಂತೆ ಕಚ್ಚಾಡುತ್ತಿದ್ದಾರೆ. ಇದರಿಂದ ಜನರು ಸಹ ಬೇಸತ್ತಿದ್ದಾರೆ' ಎಂದು ಸುರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದರು.

ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗ ಜಾರಿಗೆ ಏಕೆ ಮಾಡುತ್ತಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಅವರಿಗೆ ನಾಚಿಕೆ ಆಗಬೇಕು. ನೆರೆ ಪರಿಹಾರ ಸಿಗದೆ ಇರುವ ಕಾರಣದಿಂದ ಸಂಸದ ಜೋಶಿ ಮನೆ ಮುಂದೆ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಆದರೂ ಸರಕಾರ ಕಣ್ಣು ತೆರೆಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರದಲ್ಲಿ ತೊಡಗಿರುವ ಕೇಂದ್ರ ಹಾಗೂ ಸರಕಾರಗಳ ವಿರುದ್ಧ ರಾಜ್ಯದ ಉಪಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಬೇಕು. ಜನರು ಉಳಿಯಬೇಕಾದರೆ ಕಾಂಗ್ರೆಸ್‍ಗೆ ಬೆಂಬಲ ನೀಡಬೇಕು. ಆ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News