“ಜಾನ್ಸನ್ ಲಸಿಕೆಗೂ ರಕ್ತ ಹೆಪ್ಪುಗಟ್ಟುವಿಕೆಗೂ ನಂಟು ಪತ್ತೆಯಾಗಿಲ್ಲ”

Update: 2021-04-10 16:37 GMT
photo: twitter(@WPXI_Lori)

ವಾಶಿಂಗ್ಟನ್, ಎ. 10: ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯ ಕೊರೋನ ವೈರಸ್ ಲಸಿಕೆ ಮತ್ತು ರಕ್ತಹೆಪ್ಪುಗಟ್ಟುವಿಕೆ ನಡುವೆ ಯಾವುದೇ ನಂಟು ಈವರೆಗೆ ಪತ್ತೆಯಾಗಿಲ್ಲ ಎಂದು ಅಮೆರಿಕದ ಉನ್ನತ ಆರೋಗ್ಯ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

‘‘ಲಸಿಕೆ ನೀಡಿಕೆ ಮತ್ತು ರಕ್ತ ಹೆಪ್ಪುಗಟ್ಟುವಿಕೆ ನಡುವೆ ಈ ಹಂತದಲ್ಲಿ ನಮಗೆ ಯಾವುದೇ ನಂಟು ಕಂಡು ಬಂದಿಲ್ಲ. ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ತನಿಖೆಯನ್ನು ಮುಂದುವರಿಸುತ್ತೇವೆ’’ ಎಂದು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆಯ ಹೇಳಿಕೆಯೊಂದು ತಿಳಿಸಿದೆ.

ಅಮೆರಿಕದಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಗಳನ್ನು ಸ್ವೀಕರಿಸಿದ ಬಳಿಕ ಕೆಲವು ವ್ಯಕ್ತಿಗಳಲ್ಲಿ ರಕ್ತ ಹೆಪ್ಪುಗಟ್ಟಿರುವುದು ಹಾಗೂ ರಕ್ತದಲ್ಲಿ ಪ್ಲೇಟ್‌ಲೆಟ್‌ಗಳ ಪ್ರಮಾಣ ಇಳಿದಿರುವ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ ಎಂದು ಇಲಾಖೆ ಹೇಳಿದೆ.

‘‘ಈ ಎರಡೂ ಲಕ್ಷಣಗಳಿಗೆ ಹಲವಾರು ಕಾರಣಗಳು ಇರಬಹುದಾಗಿದೆ’’ ಎಂದಿದೆ. ‘‘ಈ ವಿಷಯದಲ್ಲಿ ನಮಗೆ ಹೆಚ್ಚಿನ ಮಾಹಿತಿ ಗೊತ್ತಾಗುತ್ತಿರುವಂತೆಯೇ ನಾವು ಸಾರ್ವಜನಿಕರಿಗೆ ತಿಳಿಸುತ್ತೇವೆ’’ ಎಂದು ಅದು ತಿಳಿಸಿದೆ.

ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆ ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟಿರುವ ನಾಲ್ಕು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಯುರೋಪಿಯನ್ ಮೆಡಿಸಿನ್ಸ್ ಏಜನ್ಸಿ ಹೇಳಿಕೆಯೊಂದರಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News