ಸಚಿವರು ಆಸ್ಪತ್ರೆ ತಪಾಸಣೆ ಮಾಡುತ್ತಿದ್ದಾಗಲೇ ಹೊರಗೆ ಕೋವಿಡ್ ರೋಗಿ ಸಾವು

Update: 2021-04-14 04:10 GMT
ಸಾಂದರ್ಭಿಕ ಚಿತ್ರ (source: PTI)

ರಾಂಚಿ, ಎ.14: ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಜಾರ್ಖಂಡ್ ಆರೋಗ್ಯ ಸಚಿವ ಬನ್ನಾ ಗುಪ್ತಾ ಪರಿಶೀಲನೆ ನಡೆಸುತ್ತಿದ್ದಾಗಲೇ, ಆಸ್ಪತ್ರೆಯ ಹೊರಗೆ ಚಿಕಿತ್ಸೆಗಾಗಿ ಕಾಯುತ್ತಿದ್ದ ಕೋವಿಡ್-19 ರೋಗಿಯೊಬ್ಬ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಹಝಾರಿಬಾಗ್‌ನಿಂದ ರಾಂಚಿಗೆ ಉತ್ತಮ ಚಿಕಿತ್ಸೆಗಾಗಿ ಈ ರೋಗಿಯನ್ನು ಕರೆತರಲಾಗಿತ್ತು. ರೋಗಿಯ ತಪಾಸಣೆ ನಡೆಸುವಂತೆ ಹಲವು ಗಂಟೆಗಳ ಕಾಲ ವೈದ್ಯರಿಗೆ ಮನವಿ ಮಾಡಿದರೂ ಯಾವ ವೈದ್ಯರೂ ಸ್ಪಂದಿಸಲಿಲ್ಲ. ಇದರ ಪರಿಣಾಮವಾಗಿ ರೋಗಿ ಮೃತಪಟ್ಟಿದ್ದಾಗಿ ಮೃತರ ಕುಟುಂಬದವರು ಆಪಾದಿಸಿದ್ದಾರೆ.

ಮುಂಜಾನೆಯೇ ರೋಗಿಯನ್ನು ರಾಂಚಿಗೆ ಕರೆ ತರಲಾಗಿತ್ತು. ಆದರೆ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ದೊರಕಿರಲಿಲ್ಲ. ಅಂತಿಮವಾಗಿ ಸರ್ದಾರ್ ಆಸ್ಪತ್ರೆಗೆ ಬಂದೆವು. ಆದರೆ ಹಲವು ಗಂಟೆಗಳ ಕಾಲ ಸುಡುಬಿಸಿಲಿನಲ್ಲಿ ಆಸ್ಪತ್ರೆಯ ಹೊರಗೆಯೇ ಕಾಯಬೇಕಾಯಿತು. ಇದರಿಂದ ರೋಗಿ ಪ್ರಾಣ ಕಳೆದುಕೊಳ್ಳಬೇಕಾಯಿತು ಎನ್ನಲಾಗಿದೆ.

ಆಸ್ಪತ್ರೆಯ ಒಳಕ್ಕೆ ಕರೆದೊಯ್ದ ವೇಳೆ ರೋಗಿ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು. ಆಸ್ಪತ್ರೆಯಿಂದ ಮೃತದೇಹದೊಂದಿಗೆ ಹೊರಬಂದ ಕುಟುಂಬ ಸದಸ್ಯರ ಜತೆಜತೆಗೇ ಸಚಿವರೂ ಹೊರಬಂದರು. ಸಚಿವರನ್ನು ನೋಡುತ್ತಿದ್ದಂತೇ ಕುಟುಂಬ ಸದಸ್ಯರು ತಾಳ್ಮೆ ಕಳೆದುಕೊಂಡು ಸಚಿವರನ್ನು ತರಾಟೆಗೆ ತೆಗೆದುಕೊಂಡರು.

"ಸಚಿವರೇ ನಾವು ವೈದ್ಯರಿಗೆ ಹಲವು ಗಂಟೆ ಮನವಿ ಮಾಡಿಕೊಂಡರೂ ನನ್ನ ತಂದೆಯ ನೆರವಿಗೆ ಯಾರೂ ಬರಲಿಲ್ಲ. ಆಸ್ಪತ್ರೆಗೆ ದಾಖಲಾಗುವ ಸಲುವಾಗಿ ಆಸ್ಪತ್ರೆ ಹೊರಗೆ ಕಾಯುತ್ತಿದ್ದೆವು. ಕಾಯುವ ಅವಧಿಯಲ್ಲೇ ಅವರು ಕೊನೆಯುಸಿರೆಳೆದರು" ಎಂದು ಸಚಿವರ ಜತೆ ಮೃತರ ಪುತ್ರಿ ವಾಗ್ವಾದಕ್ಕೆ ಇಳಿದರು. 'ಎಲ್ಲೆಡೆ ಸಮಸ್ಯೆಗಳಿವೆ. ಅದನ್ನು ಬಗೆಹರಿಸಲು ಯತ್ನಿಸುತ್ತಿರುವುದಾಗಿ' ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News