ಕೋವಿಡ್‌ ಸಾವಿನ ಸಂಖ್ಯೆಯನ್ನು ಮರೆಮಾಚುತ್ತಿದೆಯೇ ಮಧ್ಯಪ್ರದೇಶ ಸರಕಾರ?

Update: 2021-04-14 07:19 GMT

ಭೋಪಾಲ್: ಮಧ್ಯಪ್ರದೇಶದ ವಿವಿಧೆಡೆಗಳ ರುದ್ರಭೂಮಿ ಹಾಗೂ ದಫನ ಭೂಮಿಗಳಲ್ಲಿ ಹೆಣಗಳ ರಾಶಿಯೇ ಬಂದು ಬೀಳುತ್ತಿದ್ದು ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹಾಗೂ ಸಾವಿನ ಪ್ರಮಾಣದ ಏರಿಕೆಯನ್ನು ಇದು ಪ್ರತಿಫಲಿಸುತ್ತದೆಯಾದರೂ, ಸರಕಾರ ಬಿಡುಗಡೆಗೊಳಿಸಿದ ಕೋವಿಡ್ ಸಾವಿನ ಅಂಕಿಅಂಶಗಳಿಗೂ ವಾಸ್ತವದ ಚಿತ್ರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಭೋಪಾಲ್ ನಗರದ ಭದ್ಭದಾ ರುದ್ರಭೂಮಿಯಲ್ಲಿ ಅದೆಷ್ಟು ಅಂತ್ಯಕ್ರಿಯೆಗಳು ನಡೆಯುತ್ತಿವೆಯೆಂದರೆ 1984ರ ಭೋಪಾಲ ಅನಿಲ ದುರಂತದ ನಂತರ ಇಂತಹ ದೃಶ್ಯಗಳನ್ನು ನಾವು ನೋಡಿಯೇ ಇಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಮಂಗಳವಾರ ಕೇವಲ ನಾಲ್ಕು ಗಂಟೆಗಳ ಅವಧಿಯಲ್ಲಿ ಕನಿಷ್ಠ 30ರಿಂದ 40 ಕಳೇಬರಗಳನ್ನು ಇಲ್ಲಿಗೆ ತರಲಾಗಿದೆ ಎಂದು ಸ್ಥಳೀಯರೊಬ್ಬರು ಹೇಳುತ್ತಾರೆ. ರುದ್ರಭೂಮಿ ಹಾಗೂ ದಫನಭೂಮಿಗಳ ಹೊರಗೆ ಶವಗಳನ್ನು ಹೊತ್ತು ಅಂಬ್ಯುಲೆನ್ಸುಗಳು ಸಾಲು ಸಾಲಾಗಿ ನಿಂತಿವೆ. 

ಸೋಮವಾರ ಕೂಡ ಭದ್ಭದಾ ರುದ್ರಭೂಮಿಯಲ್ಲಿ 37 ಮೃತರ ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೆ ರಾಜ್ಯದ ಹೆಲ್ತ್ ಬುಲೆಟಿನ್ ಪ್ರಕಾರ ಸೋಮವಾರ ರಾಜ್ಯದಲ್ಲಿ ಒಟ್ಟು ಕೇವಲ 37 ಕೋವಿಡ್ ಸಾವುಗಳು ಸಂಭವಿಸಿವೆ.

ಎಪ್ರಿಲ್ 8ರಂದು ಭೋಪಾಲ್ ನಗರದಲ್ಲಿ ಕೋವಿಡ್ ಮಾರ್ಗಸೂಚಿಗಳಂತೆ 41 ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗಿದೆ ಆದರೆ ಆ ದಿನ ಇಡೀ ರಾಜ್ಯದಲ್ಲಿ ಕೋವಿಡ್‍ನಿಂದ 27 ಸಾವುಗಳು ಸಂಭವಿಸಿವೆ ಎಂದು ಸರಕಾರ ಬಿಡುಗಡೆಗೊಳಿಸಿದ ಹೆಲ್ತ್ ಬುಲೆಟಿನ್ ಹೇಳಿದೆ. ಅಂತೆಯೇ ಎಪ್ರಿಲ್ 10ರಂದು ಭೋಪಾಲ್ ನಗರವೊಂದರಲ್ಲಿಯೇ 56 ಕಳೇಬರಗಳ ಅಂತ್ಯಕ್ರಿಯೆ ನಡೆಸಲಾಗಿದ್ದರೆ ಹೆಲ್ತ್ ಬುಲೆಟಿನ್‍ನಲ್ಲಿ ಇಡೀ ರಾಜ್ಯದಲ್ಲಿ 24 ಮಂದಿ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು.

ಎಪ್ರಿಲ್ 12ರಂದು ಕೂಡ ಇದೇ ಪರಿಸ್ಥಿತಿಯಾಗಿದ್ದು ಭೋಪಾಲ್‍ನಲ್ಲಿ 59 ಕೋವಿಡ್ ಸೋಂಕಿತರ ಅಂತ್ಯಕ್ರಿಯೆ ನಡೆದಿದ್ದರೂ ಇಡೀ ರಾಜ್ಯದಲ್ಲಿ ಆ ದಿನ 37 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಹೆಲ್ತ್ ಬುಲೆಟಿನ್‍ನಲ್ಲಿ ಹೇಳಲಾಗಿದೆ.

ಆದರೆ ಸರಕಾರ ಮಾತ್ರ ಕೋವಿಡ್ ಸಾವಿನ ಸಂಖ್ಯೆಗಳನ್ನು ಅಧಿಕೃತ ದಾಖಲೆಗಳಲ್ಲಿ ಕಡಿಮೆ ತೋರಿಸಲಾಗುತ್ತಿದೆ ಎಂಬುದನ್ನು ನಿರಾಕರಿಸಿದೆ. ಈ ರೀತಿ ಮಾಡಿ ನಮಗೇನೂ ಲಾಭವಿಲ್ಲ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ  ಮಂಗಳವಾರ ಗರಿಷ್ಠ 8,998 ಕೋವಿಡ್ ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News