2020-21ರಲ್ಲಿ ರಸಗೊಬ್ಬರ ಸಬ್ಸಿಡಿಗಾಗಿ 1.3 ಲಕ್ಷ ಕೋಟಿ ರೂ.ವೆಚ್ಚ: ಡಿ.ವಿ. ಸದಾನಂದಗೌಡ

Update: 2021-04-14 15:07 GMT

ಹೊಸದಿಲ್ಲಿ, ಎ.14: ದೇಶಾದ್ಯಂತ ಲಭ್ಯವಿರುವ ಪೋಷಕಾಂಶಯುಕ್ತ ರಸಗೊಬ್ಬರಗಳ ಹಳೆ ದಾಸ್ತಾನನ್ನು ಹಳೆ ದರದಲ್ಲಿಯೇ ಮಾರಾಟ ಮಾಡಲು ರಸಗೊಬ್ಬರ ಉತ್ಪಾದಕರು ಸಮ್ಮತಿಸಿದ್ದಾರೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಪ್ಕೋ, ಐಪಿಎಲ್‍ನಂತಹ ಪ್ರಮುಖ ಕಂಪನಿಗಳು ಹಳೆ ದರ ಮುಂದುವರಿಸುವ ಬಗ್ಗೆ ಆಯಾ ರಾಜ್ಯ ಕೃಷಿ ಇಲಾಖೆಗಳಿಗೆ ಈಗಾಗಲೇ ಪತ್ರ ಬರೆದಿವೆ ಎಂದರು.

ರಸಗೊಬ್ಬರ ತಯಾರಿಕೆಗೆ ಬೇಕಾಗುವ ಶೇ.90ರಷ್ಟು ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳ ಬೆಲೆ ತೀವ್ರ ಹೆಚ್ಚಾದ ಕಾರಣ ಇಲ್ಲಿಯೂ ಹೆಚ್ಚಾಗಿತ್ತು. ಸದ್ಯಕ್ಕಂತೂ ರಸಗೊಬ್ಬರ ಕಂಪನಿಗಳು ಹಳೆ ದಾಸ್ತಾನನ್ನು ಹಳೆ ದರದಲ್ಲಿಯೇ ಮಾರಾಟ ಮಾಡಲು ಒಪ್ಪಿಕೊಂಡಿವೆ. ಅವರಿಗೆಲ್ಲ ಹೃತ್ಪೂರ್ವಕ ಧನ್ಯವಾದಗಳು ಎಂದು ಸದಾನಂದಗೌಡ ತಿಳಿಸಿದರು.

ರಸಗೊಬ್ಬರದ ಪ್ರಮುಖ ಬಳಕೆದಾರರಾದ ಅಮೆರಿಕ, ಬ್ರೆಝಿಲ್, ಐರೋಪ್ಯ ಒಕ್ಕೂಟ ದೇಶಗಳಲ್ಲಿ ಹಂಗಾಮು ಮುಗಿದಿರುವುದರಿಂದ ಬೇಡಿಕೆ ಕುಸಿದು ಬೆಲೆಯೂ ಇಳಿಯತೊಡಗಿದೆ. ಹಾಗಾಗಿ ಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಸುಧಾರಿಸುವ ವಿಶ್ವಾಸವಿದೆ. ದೇಶದಲ್ಲಿ ಎಲ್ಲ ನಮೂನೆಯ ರಸಗೊಬ್ಬರಗಳು ಸಾಕಷ್ಟು ದಾಸ್ತಾನು ಇವೆ. ಮುಂಗಾರು ಹಂಗಾಮಿನಲ್ಲಿ ಯಾವುದೇ ರೀತಿಯಲ್ಲಿ ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು. ಇದಕ್ಕೆ ಈಗಿನಿಂದಲೇ ಎಲ್ಲ ರೀತಿಯ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ರಸಗೊಬ್ಬರ ಬೆಲೆಏರಿಕೆ ಹಾಗೂ ಸಬ್ಸಿಡಿ ಬಗ್ಗೆ ಕೇಂದ್ರ ಸರಕಾರವನ್ನು ಟೀಕಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟ್ವೀಟ್ ಅನ್ನು ಬಾಲಿಶ ಎಂದು ಹೇಳಿದ ಸದಾನಂದ ಗೌಡ, ಮಾಜಿ ಪ್ರಧಾನಿ ಮಗನಾಗಿ, ಮಾಜಿ ಮುಖ್ಯಮಂತ್ರಿಯಾಗಿ ಅವರಿಗೆ ದೇಶದ ರಸಗೊಬ್ಬರ ಬೆಲೆ ಹಾಗೂ ಸರಬರಾಜು ವ್ಯವಸ್ಥೆ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದರ ಪ್ರಾಥಮಿಕ ತಿಳುವಳಿಕೆಯೂ ಇಲ್ಲದಿರುವುದು ಶೋಚನೀಯವಾಗಿದೆ. ಅವರಿಗೆ ಈ ಬಗ್ಗೆ ಏನಾದರು ಮಾಹಿತಿ ಬೇಕಾದರೆ ಕೇಳಲಿ. ನಾವು ಒದಗಿಸುತ್ತೇವೆ ಎಂದು ತಿರುಗೇಟು ನೀಡಿದರು.

ರೈತ ಕಲ್ಯಾಣದ ವಿಚಾರವಾಗಿ ಕೇಂದ್ರ ಸರಕಾರಕ್ಕೆ ಇರುವ ಬದ್ಧತೆಯ ಬಗ್ಗೆ ಯಾರಿಂದಲೂ ಪ್ರಮಾಣ ಪತ್ರ ಬೇಕಾಗಿಲ್ಲ. ರಸಗೊಬ್ಬರ ಸಬ್ಸಿಡಿಗಾಗಿ ಭಾರೀ ದೊಡ್ಡ ಮೊತ್ತದ ಹಣವನ್ನು ವ್ಯಯಿಸಲಾಗುತ್ತದೆ. 2019-20ನೇ ಸಾಲಿನಲ್ಲಿ ರಸಗೊಬ್ಬರ ಸಬ್ಸಿಡಿಗಾಗಿ 83,467.85 ಕೋಟಿ ರೂ.ಒದಗಿಸಲಾಗಿತ್ತು. ಕಳೆದ ಸಾಲಿನಲ್ಲಿ (2020-21) ಕೊರೋನ ಸಂಕಷ್ಟದ ಮಧ್ಯೆಯೂ 1,31,229.51 ಕೋಟಿ ರೂಪಾಯಿ ರಸಗೊಬ್ಬರ ಸಬ್ಸಿಡಿ ನೀಡಲಾಗಿದೆ. ಒಂದೇ ಒಂದು ನಯಾಪೈಸೆ ಸಬ್ಸಿಡಿಯನ್ನೂ ಉಳಿಸಿಕೊಂಡಿಲ್ಲ. ಇದು ಮೋದಿ ಸರಕಾರ ಕಾರ್ಯನಿರ್ವಹಿಸುವ ರೀತಿ ಎಂದು ಅವರು ಹೇಳಿದರು.

ರೆಮ್‍ಡಿಸಿವಿರ್ ಕೊರತೆಯಿಲ್ಲ: ಕೊರೋನ ಚಿಕಿತ್ಸೆಯಲ್ಲಿ ಬಳಸುವ ರೆಮ್‍ಡಿಸಿವಿರ್ ಲಸಿಕೆಯಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಅದರ ರಫ್ತನ್ನು ತಕ್ಷಣವೇ ನಿಷೇಧಿಸಲಾಗಿದೆ. ಏಳು ಕಂಪನಿಗಳು ಇದರ ಲೈಸನ್ಸ್ ಹೊಂದಿದ್ದು ಈ ತಿಂಗಳು 28.63 ಲಕ್ಷ ವೈಯಲ್ಸ್ ರೆಮ್‍ಡಿಸಿವಿರ್ ಉತ್ಪಾದನೆಯಾಗಲಿದೆ ಎಂದು ಸದಾನಂದಗೌಡ ತಿಳಿಸಿದರು.

ಸದ್ಯ 2.86 ಲಕ್ಷ ವೈಯಲ್ಸ್ ರೆಮ್‍ಡಿಸಿವಿರ್ ಸಂಗ್ರಹವಿದೆ. ದೇಶದಲ್ಲಿ ರೆಮ್ಡೆಸಿವಿರ್ ಉತ್ಪಾದನಾ ಸಾಮಥ್ರ್ಯ ತಿಂಗಳೊಂದಕ್ಕೆ 38.8 ಲಕ್ಷ ವೈಯಲ್ಸ್. ಈ ಸಾಮಥ್ರ್ಯವನ್ನು ಇನ್ನೂ ಹತ್ತು ಲಕ್ಷ ಹೆಚ್ಚಿಸಲಾಗುತ್ತಿದ್ದು ಇದಕ್ಕೆ ಸಂಬಂಧಿಸಿದ ಆರು ಅರ್ಜಿಗಳಿಗೆ ಡಿಸಿಜಿಐ ಈಗಾಗಲೇ ಸಮ್ಮಿತಿ ನೀಡಿದೆ ಎಂದು ಸದಾನಂದ ಗೌಡ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News