ಕೋವಿಡ್ 2ನೆ ಅಲೆ ನಿಯಂತ್ರಣಕ್ಕೆ ಸರಕಾರ ಯಾವುದೇ ಪೂರ್ವ ತಯಾರಿ ಮಾಡಿಕೊಂಡಿಲ್ಲ: ಪ್ರಿಯಾಂಕ ಖರ್ಗೆ

Update: 2021-04-16 11:43 GMT

ಬೆಂಗಳೂರು, ಎ.16: ಕೋವಿಡ್ ಎರಡನೇ ಅಲೆ ಬೆಂಗಳೂರನ್ನು ಹೊರತುಪಡಿಸಿದರೆ ಕಲಬುರಗಿಯಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿವೆ. ಆದರೆ, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಯಾವುದೇ ಪೂರ್ವ ತಯಾರಿಗಳನ್ನು ಮಾಡಿಕೊಂಡಿಲ್ಲವೆಂದು ಶಾಸಕ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ. ವೆಂಟಿಲೇಟರ್ ಕೊರತೆ ಎದ್ದು ಕಾಣುತ್ತಿದೆ. ಕೊರೋನ ಎರಡನೇ ಅಲೆ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊರೋನದ ಸಂಕಷ್ಟದ ಕಾಲದಲ್ಲಿ ತಟ್ಟೆ ಬಾರಿಸಲು, ದೀಪ ಹಚ್ಚಲು ಕರೆ ನೀಡಿದರು. ಈಗ ಟೀಕಾ ಉತ್ಸವ ಮಾಡುವ ಮೂಲಕ ರೋಗವನ್ನು ಉತ್ಸವದ ರೀತಿ ಆಚರಣೆ ಮಾಡುತ್ತಿದ್ದಾರೆ. ಹಾಗೂ ಗೃಹಮಂತ್ರಿ ಅಮಿತ್ ಶಾ ಅನ್ಯ ಶಾಸಕರನ್ನು ಖರೀದಿಸಿ ಸರಕಾರ ಮಾಡಲು ಮಗ್ನರಾಗಿದ್ದಾರೆಂದು ಅವರು ಆರೋಪಿಸಿದ್ದಾರೆ.

ಬಿಜೆಪಿ ಸರಕಾರ ಅಧಿಕಾರಕ್ಕಾಗಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಚುನಾವಣೆ ನಡೆಸುವ ಮೂಲಕ ಕೊರೋನ ಹರಡಲು ಸಹಕಾರಿಯಾಗಿದ್ದಾರೆಂದು ಮಾಜಿ ಸಚಿವ ಶರಣ ಪ್ರಕಾಶ್ ಪಾಟೀಲ್ ಕಿಡಿಕಾರಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ್ ಗುತ್ತೇದಾರ್, ಸುಭಾಷ್ ರಾಠೋಡ್ ಸೇರಿದಂತೆ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News