ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ: ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2021-04-16 12:08 GMT

ಬೆಂಗಳೂರು, ಎ.16: ವೈದ್ಯಕೀಯ ಪದವಿ ಪೂರೈಸಿದ ಅಭ್ಯರ್ಥಿಗಳಿಂದ ಕಡ್ಡಾಯ ಸೇವೆ ಕಾಯ್ದೆ-2012ನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ನಗರದ ಡಾ. ಬಿ.ಆರ್ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪೂರೈಸಿರುವ ಶರಣ್ಯ ಮೋಹನ್ ಹಾಗೂ ಇತರೆ 43 ಮಂದಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ನ್ಯಾಯಪೀಠ, ಕೇಂದ್ರ ಸರಕಾರ, ರಾಜ್ಯ ಸರಕಾರ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ(ಎನ್‍ಎಂಸಿ) ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಎ.21ಕ್ಕೆ ಮುಂದೂಡಿದೆ.

ಅರ್ಜಿದಾರರ ಮನವಿ ಏನು: ರಾಜ್ಯ ಸರಕಾರ ಕಡ್ಡಾಯ ಸೇವೆ ಕಾಯ್ದೆಯನ್ನು 2012ರಲ್ಲಿ ಜಾರಿ ಮಾಡಿದೆ. 2019ರ ಆಗಸ್ಟ್ ನಲ್ಲಿ ಹೈಕೋರ್ಟ್ ಕಾಯ್ದೆಯ ಸಿಂಧುತ್ವವನ್ನೂ ಎತ್ತಿಹಿಡಿದಿದೆ. ಆದರೆ, ಕೇಂದ್ರ ಸರಕಾರ 2019ರ ಸೆಪ್ಟೆಂಬರ್ ನಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‍ಎಂಸಿ) ರಚಿಸಿದ್ದು, ವೈದ್ಯಕೀಯ ಕೋರ್ಸ್ ಗಳ ಪ್ರವೇಶಾತಿಗೆ ಸಂಬಂಧಿಸಿದ ಎಲ್ಲ ಅಧಿಕಾರ ಎನ್‍ಎಂಸಿಗೆ ಸೇರಿದೆ. ರಾಜ್ಯ ಸರಕಾರಗಳಿಗೆ ಈ ವಿಚಾರದಲ್ಲಿ ಯಾವುದೇ ಅಧಿಕಾರವಿಲ್ಲ. ಹೀಗಿದ್ದೂ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶನಾಲಯ 2021ರ ಫೆ.21ರಂದು ಸುತ್ತೋಲೆ ಹೊರಡಿಸಿ, ಕಡ್ಡಾಯ ಸೇವೆ ಪೂರ್ಣಗೊಳಿಸುವವರೆಗೆ ಪ್ರಮಾಣ ಪತ್ರ ವಿತರಿಸದಂತೆ, ಮೂಲ ದಾಖಲೆಗಳನ್ನು ಹಿಂದಿರುಗಿಸದಂತೆ ವೈದ್ಯಕೀಯ ಕಾಲೇಜುಗಳಿಗೆ ಸೂಚಿಸಿದೆ.

ಮೂಲ ದಾಖಲೆಗಳಿಲ್ಲದೆ ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್‍ಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಅನೇಕ ರಾಜ್ಯಗಳಲ್ಲಿ ಕಡ್ಡಾಯ ಸೇವೆ ಎಂಬುದೇ ಇಲ್ಲ. ಕಡ್ಡಾಯ ಸೇವೆ ಮಾಡುವಂತೆ ಒತ್ತಾಯಿಸುವುದು ಶಿಕ್ಷಣ ಮುಂದುವರೆಸುವ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News