ಕೊರೋನ ಮೊದಲ ಅಲೆಯಲ್ಲೇ ಗಂಭೀರತೆ ಅರಿವಾದರೂ ಸರಕಾರಗಳು ಪಾಠ ಕಲಿತಿಲ್ಲ: ಸಿದ್ದರಾಮಯ್ಯ

Update: 2021-04-17 07:30 GMT

ಬೆಂಗಳೂರು, ಎ.17: ಕೊರೋನ ಸೋಂಕಿನ ಎರಡನೇ ಅಲೆಯ ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರಗಳ ದುರ್ಬಲ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಹಿರಂಗಗೊಂಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕೋವಿಡ್ ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದೆ ಜನರು ಅಸಹಾಯಕರಾಗಿದ್ದಾರೆ. ಕೊರೋನ ಮೊದಲ ಅಲೆಯ ಸಂದರ್ಭದಲ್ಲಿಯೇ ಅದರ ಗಂಭೀರತೆ ದರ್ಶನವಾಗಿದ್ದರೂ ಸರ್ಕಾರಗಳು ಪಾಠ ಕಲಿತಿಲ್ಲ. ಕೋವಿಡ್ ಚಿಕಿತ್ಸೆಗೆ ಹೆಚ್ಚಾಗಿ ಬಳಸಲಾಗುವ ರೆಮ್‌ಡಿಸಿವರ್ ಔಷಧಿ ದಾಸ್ತಾನು ಇಲ್ಲದಾಗಿದೆ. ಸರ್ಕಾರವು ಔಷಧಿಗಳ ದಾಸ್ತಾನು ಏಕೆ ಮಾಡಿಕೊಂಡಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸರಕಾರಿ ಆಸ್ಪತ್ರೆಗಳು ತುಂಬಿರುವುದರಿಂದ ರೋಗಿಗಳು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳತ್ತ ಹೋಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಯ ಶುಲ್ಕವನ್ನು ಭರಿಸಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಲಾದ ರೋಗಿಗಳಿಗೆ ಕೋವಿಡ್ 19 ಚಿಕಿತ್ಸೆಯನ್ನು ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರನ್ನು ಅವರು ಒತ್ತಾಯಿಸಿದ್ದಾರೆ.

ಬಿಜೆಪಿ ನಾಯಕರು ಕೇವಲ ಚುನಾವಣೆಯ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುತ್ತಿದ್ದು, ಆಡಳಿತದ ಬಗ್ಗೆ ಗಮನ ಹರಿಸದೇ ಇರುವುದು ನಿಜಕ್ಕೂ ದುರದೃಷ್ಟಕರ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News