ಕೊರೋನದಿಂದ ಮೃತಪಟ್ಟ ಪತಿಯ ಶವ ರೂಮಿನಲ್ಲಿಟ್ಟು ಕಾದ ಮಹಿಳೆ: ಮನೆಯ ಒಳಗೆ ಹೋಗದೆ ಬಾಮೈದ ಮಾಡಿದ್ದೇನು ?

Update: 2021-04-17 08:57 GMT
ಸಾಂದರ್ಭಿಕ ಚಿತ್ರ

ರಾಜ್ಯದೆಲ್ಲೆಡೆ ಕೊರೋನ ಸೋಂಕಿನ ಎರಡನೇ ಎಲೆ ಅಬ್ಬರಿಸುತ್ತಿದ್ದು, ಸಾವು- ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಈ ನಡುವೆ ಕೊರೋನದ ಬಗ್ಗೆ ನಿರ್ಲಕ್ಷ್ಯ ವಹಿಸಿ ಜೀವಕ್ಕೆ ಅಪಾಯ ತಂದುಕೊಂಡ ಘಟನೆಯೊಂದರ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ತಮ್ಮ ಫೇಸ್‌ಬುಕ್‌ ಪೋಸ್ಟ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸುರೇಶ್‌ ಕುಮಾರ್‌ ಅವರು ಕನಕಪುರ ರಸ್ತೆಯ ತಲಘಟ್ಟಪುರದ ಸಮೀಪದ ಹಳ್ಳಿಯೊಂದರಲ್ಲಿ ವಾಸವಿದ್ದ ದಂಪತಿಯ ಬಗ್ಗೆ ಬರೆದಿದ್ದು, ಕೋವಿಡ್ ಬಂದು ಮನೆಯಲ್ಲೇ ಮೃತಪಟ್ಟ ಗಂಡನ ಬಗ್ಗೆ ಹಾಗೂ ಮೃತ ಪತಿಯ ಶವ ಇರಿಸಿ ಪತ್ನಿ ಹಾಲ್ ನಲ್ಲಿ ಕಾದ ಮತ್ತು ಘಟನೆಯ ಬಗ್ಗೆ ತಿಳಿದು ಮನೆಗೆ ಬಂದ ಬಾಮೈದ ಕಾರಿನಲ್ಲೇ ರಾತ್ರಿ ಕಳೆದ ಬಗ್ಗೆ ‘ಫೇಸ್‌ಬುಕ್‌’ನಲ್ಲಿ ಬರೆದುಕೊಂಡಿದ್ದಾರೆ.

ಸುರೇಶ್ ಕುಮಾರ್‌ ‘ಫೇಸ್‌ ಬುಕ್‌’ ಪೋಸ್ಟ್

ನಿನ್ನೆ ನಡೆದ ಘಟನೆಯಿದು.
ಕನಕಪುರ ರಸ್ತೆಯ ತಲಗಟ್ಟಪುರ ಹತ್ತಿರದ ಒಂದು ಹಳ್ಳಿಯಲ್ಲಿ ಗಂಡ ಹೆಂಡತಿ ವಾಸವಾಗಿದ್ದರು.
ಅದರಲ್ಲಿ ಗಂಡನಿಗೆ ಕೋವಿಡ್ ಬಂದು ತೀರಿ ಹೋಗಿದ್ದಾರೆ.. ಅಂತ್ಯಸಂಸ್ಕಾರ ಮಾಡಲು ಯಾರು ಇಲ್ಲ.
ಈ ಮಾಹಿತಿಯನ್ನು ನನ್ನ ಪತ್ರಕರ್ತ ಗೆಳೆಯರೊಬ್ಬರು ನನಗೆ ತಿಳಿಸಿದರು.
ತಕ್ಷಣವೇ ರಾಜಾಜಿನಗರದ ನಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ಮಾಡಿ ವಿಷಯ ತಿಳಿಸಿ ಅಗತ್ಯ ನೆರವು ನೀಡಲು ತಿಳಿಸಿದೆ.
ನಮ್ಮ ಕಾರ್ಯಕರ್ತರು ವಿಚಾರಿಸಿದಾಗ ಆ ವ್ಯಕ್ತಿಗೆ ಜ್ವರ ಬಂದ ಕಾರಣ ಸ್ಥಳೀಯ ಆಸ್ಪತ್ರೆಗೆ ಕಳೆದ ವಾರ ಹೋಗಿ ಪರೀಕ್ಷೆ ಮಾಡಿಸಿರುವ ವಿಚಾರ ತಿಳಿದುಬಂದಿದೆ. ಅಲ್ಲಿ ಅವರಿಗೆ ಕೋವಿಡ್ ಪಾಸಿವಿಟ್ ಎಂದು ತಿಳಿಯುತ್ತದೆ.
ಅವರು ನೇರವಾಗಿ ಮನೆಗೆ ಬಂದು ಕೋಣೆಯಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಗುತ್ತಾರೆ.
ಮೊನ್ನೆ ಸಂಜೆ ಅವರ ಹೆಂಡತಿ ಕೋಣೆಗೆ ಹೋಗಿ ನೋಡಿದರೆ ಗಂಡ ಮರಣ ಹೊಂದಿರುವುದು ತಿಳಿಯುತ್ತದೆ.
ಇದರಿಂದ ಹೆಂಡತಿಯು ಗಾಬರಿಯಾಗಿ ಏನು ಮಾಡಬೇಕೆಂದು ತಿಳಿಯದೆ ದಿಗ್ಬ್ರಮೆಯಾಗುತ್ತದೆ.
ನಂತರ ಅಕ್ಕ ಪಕ್ಕದ ಮನೆಯವರಿಗೆ ವಿಷಯ ತಿಳಿದು ಅವರು ಮೈಸೂರಿನಲ್ಲಿರುವ ಗಂಡನ ಬಾಮೈದನಿಗೆ ಕರೆ ಮಾಡಿ ತಿಳಿಸುತ್ತಾರೆ.
ಮೈಸೂರಿನಿಂದ ಕಾರಿನಲ್ಲಿ ಬಂದ ಅವರು ಕೊರೋನ ಕಾರಣದಿಂದ ಮನೆಯ ಒಳಗೆ ಹೋಗದೆ ಹೊರಗಡೆ ಕಾರಿನಲ್ಲೇ ರಾತ್ರಿ ಪೂರ್ತಿ ಮಲಗುತ್ತಾರೆ.
ಒಂದು ಕಡೆ ರೂಮ್ ನಲ್ಲಿ ಹೆಣ, ಹಾಲ್ ನಲ್ಲಿ ಹೆಂಡತಿ, ಹೊರಗಡೆ ಕಾರಿನಲ್ಲಿ ಬಾಮೈದ.....ಯಾರಿಗೂ ಮುಂದೆ ಏನು ಮಾಡಬೇಕೆಂದು ತಿಳಿದಿಲ್ಲ.
16-04-2021 ಶುಕ್ರವಾರ,
ನಿನ್ನೆ ನಮ್ಮ ರಾಜಾಜಿನಗರ ಕಾರ್ಯಕರ್ತರು ಸ್ಥಳೀಯ ಆರೋಗ್ಯಾಧಿಕಾರಿ ಅವರನ್ನು ಸಂಪರ್ಕಿಸಿ ಅವರಿಂದ ಡೆತ್ ಸರ್ಟಿಫಿಕೇಟ್ ಪಡೆದು ಕೆಂಗೇರಿಯ ಚಿತಗಾರದಲ್ಲಿ ಶವದ ಅಂತಿಮ ಕಾರ್ಯಕ್ಕೆ ವ್ಯವಸ್ಥೆ ಮಾಡಿ ಮುಗಿಸಿದರು.
ಅಲ್ಲಿ ಶವದ ಪರವಾಗಿ ಅವರ ಒಬ್ಬ ಸಂಬಂಧಿ ಬಿಟ್ಟು ಯಾರು ಸಹ ಇರಲಿಲ್ಲ.
ಅವರು ಶವದ ಹತ್ತಿರವಿರಲಿ, ಅದರ ವಾಹನ ಹತ್ತಿರ ಬರಲು ಹೆದರುತ್ತಿದ್ದರು.
ಮೃತದೇಹದ ಪೂಜಾಕಾರ್ಯಯೂ ಮಾಡಲಿಲ್ಲ.
ಅಂತಿಮವಾಗಿ ನಮ್ಮ ಕಾರ್ಯಕರ್ತರೆ ಅಂತಿಮ ಸಂಸ್ಕಾರ ಮಾಡಿ ಬಂದರು.
ಧೈರ್ಯದಿಂದ, ಒಳ್ಳೆ ಮನಸ್ಸಿನಿಂದ, ಯಾವುದೇ ಫಲಾಪೇಕ್ಷೆ ಇಲ್ಲದೆ ಆ ಕಾರ್ಯ ಮಾಡಿದ ನಮ್ಮ ಕಾರ್ಯಕರ್ತ ರಾದ ಗಿರೀಶ್, ಲಿಂಗರಾಜು, ಉಮೇಶ್ ಹಾಗೂ ಪ್ರವೀಣ್ ರವರಿಗೆ ನನ್ನ ನಮನಗಳು.

- ಸುರೇಶ್ ಕುಮಾರ್‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News