ಕರ್ತವ್ಯ ನಿರತ ಬಸ್ ಚಾಲಕನ ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ

Update: 2021-04-17 14:40 GMT
ನಬಿ ರಸೂಲ್ ಆವಟಿ

ಬಾಗಲಕೋಟೆ, ಎ.17: ವಾಯವ್ಯ ಸಾರಿಗೆ ಸಂಸ್ಥೆ ಚಾಲಕ ನಬಿ ರಸೂಲ್ ಆವಟಿ ಅವರ ಕೊಲೆ ಪ್ರಕರಣ ಸಂಬಂಧ ಚಾಲಕ ಸೇರಿ ಐವರು ಸಾರಿಗೆ ಇಲಾಖೆ ಸಿಬ್ಬಂದಿಯನ್ನು ಬಾಗಲಕೋಟೆ ವಿಶೇಷ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಚಾಲಕ ಕಂ ನಿರ್ವಾಹಕ ಅರುಣ್ ಅರಕೇರಿ, ವಾಯವ್ಯ ಸಾರಿಗೆ ಸಂಸ್ಥೆಯ ಜಮಖಂಡಿ ಘಟಕದ ಸಿಬ್ಬಂದಿ ಮಲ್ಲಪ್ಪ ತಳವಾರ, ಚೇತನ ಕರ್ವೆ, ಸದಾಶಿವ ಕಂಕಣವಾಡಿ, ಲೋಹಿತ್ ದಾಸರ ಎಂಬವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಅರುಣ್ ಅರಕೇರಿ ಎಂಬಾತ ಪ್ರಮುಖ ಆರೋಪಿಯಾಗಿದ್ದು, ಜಮಖಂಡಿ ಸಾರಿಗೆ ನೌಕರರ ಮುಷ್ಕರದ ನೇತೃತ್ವ ವಹಿಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಆರೋಪಿ ಅರುಣ್ ಅರಕೇರಿ ಅನ್ನು ಉತ್ತರ ಕನ್ನಡ ಜಿಲ್ಲೆ ಭಟ್ಕಳ ಘಟಕಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದು ಆತನ ಆಕ್ರೋಶ ಹೆಚ್ಚಿಸಿ ಈ ಕೃತ್ಯ ನಡೆಸಲು ಪ್ರೇರೇಪಿಸಿತು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಬಸ್ಸಿನಲ್ಲಿಯೇ ಇದ್ದ?: ಆರೋಪಿ ಅರುಣ್ ಅರಕೇರಿ, ದಾಳಿಗೆ ತುತ್ತಾದ ಬಸ್‍ನಲ್ಲಿಯೇ ವಿಜಯಪುರದಿಂದ ಕೃತ್ಯ ನಡೆದ ಸ್ಥಳದವರೆಗೆ ಪ್ರಯಾಣಿಸಿದ್ದ ಎಂಬುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ಅಂದು ಇಲ್ಲಿನ ಘತ್ತರಗಾ–ಜಮಖಂಡಿ ಬಸ್ ವಿಜಯಪುರ ಮಾರ್ಗವಾಗಿ ಬರುವಾಗ ಅಲ್ಲಿ ಬಸ್ ಹತ್ತಿದ್ದ ಅರುಣ್ ಅರಕೇರಿ, ಬಸ್ ಎಲ್ಲೆಲ್ಲಿ ಸಂಚರಿಸುತ್ತಿದೆ ಎಂಬುದರ ಬಗ್ಗೆ ಸಹೊದ್ಯೋಗಿಗಳಿಗೆ ಮಾಹಿತಿ ನೀಡುತ್ತಿದ್ದರು. ಕೃತ್ಯ ನಡೆಯುವುದಕ್ಕೂ ಮುನ್ನ ಉಳಿದ ನಾಲ್ವರು ಆರೋಪಿಗಳು ಎರಡು ಬೈಕ್‍ಗಳಲ್ಲಿ ಬಬಲೇಶ್ವರಕ್ಕೆ ಪರಿಚಿತರೊಬ್ಬರ ಸಾವಿನ ಅಂತ್ಯಕ್ರಿಯೆಗೆ ತೆರಳಿ ಅದೇ ಮಾರ್ಗದಲ್ಲಿ ಜಮಖಂಡಿಗೆ ವಾಪಸಾಗುತ್ತಿದ್ದರು.

ಈ ವೇಳೆ ಚಿಕ್ಕಲಕಿ ಕ್ರಾಸ್‍ನಲ್ಲಿ ಎಲ್ಲರೂ ಕುಳಿತು ಮದ್ಯ ಸೇವನೆ ಮಾಡಿ ಬಸ್ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಬರುತ್ತಿದ್ದಂತೆಯೇ ನಿರ್ಜನ ಪ್ರದೇಶದಲ್ಲಿ ಅಡ್ಡಹಾಕಿ ನಾಲ್ವರೂ ಕಲ್ಲು ಎಸೆದಿದ್ದರು ಎನ್ನಲಾಗಿದೆ. ಈ ವೇಳೆ ಕುತ್ತಿಗೆ ಭಾಗಕ್ಕೆ ಬಿದ್ದ ಕಲ್ಲೇಟಿನಿಂದ ನಬಿ ರಸೂಲ್ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು.

ಇದಾದ ಬಳಿಕ ಆರೋಪಿ ಜಮಖಂಡಿಗೆ ಬೇರೆ ವಾಹನದಲ್ಲಿ ತೆರಳಿ ಏನೂ ಆಗಿಲ್ಲವೆಂಬಂತೆ ಮನೆ ಸೇರಿದ್ದರು. ಘಟನೆ ತೀವ್ರ ಗಂಭೀರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಜಿಲ್ಲೆಯ ಹಿರಿಯ ಪೊಲೀಸರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಆನಂತರ ಆರೋಪಿಗಳ ಮೊಬೈಲ್ ಫೋನ್ ಕರೆ ವಿವರ (ಸಿಡಿಆರ್) ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಐವರು ಸಿಕ್ಕಿಬಿದಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News