ಯುವ ತಲೆಮಾರಿಗೆ ನಾಯಕತ್ವ ಹಸ್ತಾಂತರ: ಕ್ಯೂಬ ನಾಯಕ ರೌಲ್ ಕ್ಯಾಸ್ಟ್ರೊ ಘೋಷಣೆ

Update: 2021-04-17 15:17 GMT

photo; twitter(@Plaid_RCastro)
 

ಕ್ಯೂಬ ಹವಾನ (ಕ್ಯೂಬ), ಎ. 17: ಪ್ರಭಾವಿ ಕ್ಯೂಬ ಕಮ್ಯುನಿಸ್ಟ್ ಪಕ್ಷದ ನಾಯಕತ್ವವನ್ನು ಯುವ ತಲೆಮಾರಿಗೆ ಹಸ್ತಾಂತರಿಸುವುದಾಗಿ ಕ್ಯೂಬ ನಾಯಕ ರೌಲ್ ಕ್ಯಾಸ್ಟ್ರೊ ಶುಕ್ರವಾರ ಸಂಸತ್ತಿನಲ್ಲಿ ಘೋಷಿಸಿದ್ದಾರೆ. ಇದರೊಂದಿಗೆ ರೌಲ್ ಕ್ಯಾಸ್ಟ್ರೊ ಮತ್ತು ಅವರ ಅಣ್ಣ ಫಿಡೆಲ್ ಕ್ಯಾಸ್ಟ್ರೊ ಅವರ ಆರು ದಶಕಗಳ ಕುಟುಂಬ ಆಡಳಿತ ಕೊನೆಗೊಳ್ಳಲಿದೆ.

ನಾಯಕತ್ವವನ್ನು ದಶಕಗಳ ಅನುಭವ ಹೊಂದಿರುವ ಪಕ್ಷ ನಿಷ್ಠರಿಗೆ, ಪಕ್ಷದಲ್ಲಿ ಹಂತ-ಹಂತವಾಗಿ ಮೇಲೆ ಬಂದವರಿಗೆ ಹಾಗೂ ಸಾಮ್ರಾಜ್ಯಶಾಹಿ ವಿರೋಧಿ ಧೋರಣೆ ಹೊಂದಿರುವವರಿಗೆ ನೀಡಲಾಗುವುದು ಎಂದು ಸಂಸತ್ ಅಧಿವೇಶನದ ಆರಂಭಿಕ ಭಾಷಣದಲ್ಲಿ 89 ವರ್ಷದ ರೌಲ್ ಕ್ಯಾಸ್ಟ್ರೊ ಹೇಳಿದರು.

ನಾಲ್ಕು ದಿನಗಳ ಸಂಸತ್ ಅಧಿವೇಶನ ಶುಕ್ರವಾರ ಆರಂಭಗೊಂಡಿದೆ.

2016ರಲ್ಲಿ ನಡೆದ ಈ ಹಿಂದಿನ ಸಂಸತ್ ಅಧಿವೇಶನದಲ್ಲಿ ಮಾತನಾಡಿದ್ದ ರೌಲ್ ಕ್ಯಾಸ್ಟ್ರೊ, 1959ರ ಕ್ರಾಂತಿಯಲ್ಲಿ ಅವೆುರಿಕ ಬೆಂಬಲಿತ ಸರ್ವಾಧಿಕಾರಿಯನ್ನು ಪದಚ್ಯುತಗೊಳಿಸುವುದಕ್ಕಾಗಿ ಸಿಯಾರ ಮಾಯಿಸ್ಟ್ರ ಕದನದಲ್ಲಿ ಹೋರಾಡಿದ ‘ಐತಿಹಾಸಿಕ ತಲೆಮಾರಿನ’ ನೇತೃತ್ವದ ಕೊನೆಯ ಸರಕಾರ ಇದಾಗಿದೆ ಎಂದು ಹೇಳಿದ್ದರು.

ಅವರು ಈಗಾಗಲೇ 2018ರಲ್ಲಿ ತನ್ನ ಶಿಷ್ಯ 60 ವರ್ಷದ ಮಿಗಿಯೆಲ್ ಡಿಯಾಝ್-ಕಾನೆಲ್‌ಗೆ ಅಧ್ಯಕ್ಷ ಪದವಿಯನ್ನು ಹಸ್ತಾಂತರಿಸಿದ್ದಾರೆ.

ಸಂಸತ್ ಅಧಿವೇಶನವು ಕ್ಯೂಬ ಕಮ್ಯುನಿಸ್ಟ್ ಪಕ್ಷದ ಅತ್ಯಂತ ಮಹತ್ವದ ಸಭೆಯಾಗಿದ್ದು, ಐದು ವರ್ಷಗಳಿಗೊಮ್ಮೆ ನಡೆಯುತ್ತದೆ.

ರೌಲ್ ಕ್ಯಾಸ್ಟ್ರೊ 2008ರಲ್ಲಿ ಅಧಿಕಾರವನ್ನು ತನ್ನ ಅಣ್ಣ ಫಿಡೆಲ್ ಕ್ಯಾಸ್ಟ್ರೊರಿಂದ ಪಡೆದುಕೊಂಡಿದ್ದರು. ಫಿಡೆಲ್ ಕ್ಯಾಸ್ಟ್ರೊ 2016 ನವೆಂಬರ್‌ನಲ್ಲಿ ನಿಧನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News