ರೈತರ ಹೋರಾಟ ಬೆಂಬಲಿಸಿ ಮಲೆಮಹದೇಶ್ವರ ಬೆಟ್ಟದಿಂದ ದಿಲ್ಲಿಗೆ ಪಾದಯಾತ್ರೆ ಕೈಗೊಂಡ ಯುವಕ

Update: 2021-04-17 16:32 GMT

ತುಮಕೂರು,ಎ.17: ದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ರಾಜ್ಯದ ಜಿಯೋಸ್ಟೇಷಿಯಲ್ ಇಂಜಿನಿಯರಿಂಗ್‍ನಲ್ಲಿ ಎಂ.ಟೆಕ್ ಪೂರೈಸಿರುವ ಟೆಕ್ಕಿಯೊಬ್ಬರು ಮಲೆಮಹದೇಶ್ವರ ಬೆಟ್ಟದಿಂದ ದಿಲ್ಲಿವರೆಗೆ 6 ಸಾವಿರ ಕಿ.ಮೀ. ಪಾದಯಾತ್ರೆ ಕೈಗೊಂಡಿದ್ದಾರೆ.

ರೈತರ ಹೋರಾಟವನ್ನು ಬೆಂಬಲಿಸಿ ಮಲೆಮಹದೇಶ್ವರ ಬೆಟ್ಟದಿಂದ ಪಾದಯಾತ್ರೆ ಕೈಗೊಂಡಿರುವ ಬಾಗಲಕೋಟೆ ಮೂಲದ ನಾಗರಾಜ್ ಕುಲಗುಟಕರ್ ಅವರು ತಾಲೂಕಿನ ಹೊನ್ನುಡಿಕೆಗೆ ಆಗಮಿಸಿದಾಗ ರೈತ ಸಂಘ ಹಾಗೂ ಸಹಜ ಬೇಸಾಯ ಶಾಲೆ ವತಿಯಿಂದ ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಪಾದಯಾತ್ರಿ ನಾಗರಾಜ್ ಕುಲಗುಟಕರ್, ನಾನು 2015 ರಿಂದಲೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಭ್ರಷ್ಟಾಚಾರ, ಅಕ್ರಮ ಮರಳು ಸಾಗಣೆ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದೇನೆ. ಪ್ರಸಕ್ತ 4 ತಿಂಗಳಿಂದಲೂ ದಿಲ್ಲಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೆಲ ಕಾಯ್ದೆಗಳ ವಾಪಸ್ಸಾತಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಪಾದಯಾತ್ರೆ ಕೈಗೊಂಡಿರುವುದಾಗಿ ಹೇಳಿದರು.

ಫೆ.11 ರಿಂದ ಪಾದಯಾತ್ರೆ ಕೈಗೊಂಡಿದ್ದು, ಪ್ರತಿ ದಿನ 30 ಕಿ.ಮೀ. ಕ್ರಮಿಸಿ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳ ಮೂಲಕ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಾ ಸಾಗುತ್ತಿದ್ದೇನೆ. ನಾನು ಸಾಗಿದ ದಾರಿಯುದ್ದಕ್ಕೂ ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸುತ್ತಿವೆ ಎಂದರು. 

ನಾನು ಸಾಗಿದ ದಾರಿಯುದ್ದಕ್ಕೂ ರೈತರ ಹೋರಾಟವನ್ನು ಜೀವಂತವಾಗಿರಿಸುತ್ತಾ ಕೇಂದ್ರ ವಿರುದ್ಧ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ತಿದ್ದುಪಡಿ ಕಾಯ್ದೆಗಳ ವಾಪಸ್ಸಾತಿಗೆ ರೈತರು ಒತ್ತಾಯ ಮಾಡುತ್ತಿರುವುದು ನ್ಯಾಯಯುತವಾಗಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಕೇಂದ್ರ ಸರ್ಕಾರದ ಧೋರಣೆಯನ್ನು ಪ್ರಶ್ನಿಸಿ ಹೋರಾಟ ನಡೆಸುವವರ ಮೇಲೆ ದೇಶದ್ರೋಹದ ಕೇಸು ಹಾಕಿ ಹೋರಾಟ ಹತ್ತಿಕ್ಕುವ ಕೆಲಸ, ಪೊಲೀಸರಿಂದ ದೌರ್ಜನ್ಯ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು. 

ಮಲೆಮಹದೇಶ್ವರ ಬೆಟ್ಟದಿಂದ ತುಮಕೂರು ಜಿಲ್ಲೆವರೆಗೆ 1300 ಕಿ.ಮೀ. ಕ್ರಿಮಿಸಿದ್ದೇನೆ. ನಾನು ನೇರವಾಗಿ ತುಮಕೂರು ಜಿಲ್ಲೆಗೆ ಬಂದಿಲ್ಲ. ಚಾಮರಾಜನಗರ, ಮೈಸೂರು, ಬೆಂಗಳೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಕ್ರಮಿಸಿ ನಂತರ ತುಮಕೂರಿಗೆ ಬಂದಿದ್ದೇನೆ. ಹಾಗಾಗಿ 1300 ಕಿ.ಮೀ. ಆಗಿದೆ. ಇಲ್ಲಿಂದ  ಚಿತ್ರದುರ್ಗ, ದಾವಣಗೆರೆ, ಹಾವೇರಿ, ವಿಜಯಪುರ ಸೇರಿದಂತೆ ಮಧ್ಯ ಕರ್ನಾಟಕ ಜಿಲ್ಲೆಗಳ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರ ಮುಖಾಂತರ ನೇರವಾಗಿ ದಿಲ್ಲಿಗೆ ತೆರಳುತ್ತೇನೆ ಎಂದರು. 

ಪಾದಯಾತ್ರಿ ನಾಗರಾಜ ಕಲಗುಟಕರ್ ಅವರನ್ನು ಅಭಿನಂದಿಸಿದ ಮಾತನಾಡಿದ ರೈತ ಸಂಘದ ಎಲ್. ರವೀಶ್, ರೈತರು ಮತ್ತು ರೈತ ಸಂಘಟನೆಯವರು ಮಾಡಬೇಕಾದ ಕೆಲಸವನ್ನು ಇವರು ಮಾಡುತ್ತಿದ್ದಾರೆ. ಇವರು ಸಾಗುವ ದಾರಿಯುದ್ದಕ್ಕೂ ಒಳ್ಳೆಯದಾಗಲಿ. ಇವರ ಹೋರಾಟ ಯಶಸ್ವಿಯಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ರೈತ ಸಂಘಟನೆಯ ರಂಗಸ್ವಾಮಯ್ಯ, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News