ದಲಿತ ಕೇರಿಗಳಿಗೆ ತೆರಳಿ ಹೇರ್ ಕಟಿಂಗ್ ಮಾಡುತ್ತಿರುವ ಸಹೋದರರು

Update: 2021-04-18 17:26 GMT

ಮೈಸೂರು,ಎ.18: ಗ್ರಾಮಾಂತರ ಪ್ರದೇಶಗಳಲ್ಲಿ ದಲಿತರಿಗೆ ಹೇರ್ ಕಟಿಂಗ್ ಮಾಡುವುದೆಂದರೆ ಅಪಮಾನ ಎಂದು ಭಾವಿಸಿರುವವರ ನಡುವೆ ದಲಿತ ಕೇರಿಗಳಿಗೆ ತೆರಳಿ ಅಲ್ಲಿನ ಜನರಿಗೆ ಅವರ ಮನೆ, ಪಡಸಾಲೆ ಮತ್ತು ಕೊಟ್ಟಿಗೆಗಳಲ್ಲಿ ಹೇರ್ ಕಟಿಂಗ್ ಮಾಡುವ ಮೂಲಕ ಸ್ವಾವಲಂಭನೆಯ ಬದುಕು ಕಟ್ಟಿಕೊಳ್ಳಲು ಸಹೋದರರಿಬ್ಬರು ಪ್ರಯತ್ನ ಪಡುತ್ತಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಪ್ಪಸೋಗೆ ಗ್ರಾಮದ ಕೆ.ಸಿ.ಮಹದೇವ ಹಾಗೂ ಕೆ.ಸಿ.ಸಿದ್ದರಾಜು ತಮ್ಮ ಬಿಡುವಿನ ಸಮಯದಲ್ಲಿ ದಲಿತರಿಗೆ ಕ್ಷೌರ ಮಾಡುವ ಮೂಲಕ ಉಪ್ಪಿ ಬ್ರದರ್ಸ್ ಎಂದೇ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಖ್ಯಾತಿ ಪಡೆದಿದ್ದಾರೆ.

ದಲಿತರಿಗೆ ಗ್ರಾಮಾಂತರ ಪ್ರದೇಶದಲ್ಲಿ ಇನ್ನೂ ಕ್ಷೌರ ಮಾಡುವುದಿಲ್ಲ ಎಂಬ ಅಪವಾದವನ್ನು ತೊಡೆದು ಹಾಕಲು ಮುಂದಾಗಿರುವ ಈ ಸೋಹದರರು, ನಾವು ಯಾರಿಗೂ ಮತ್ತು ಯಾವುದರಲ್ಲೂ ಕಮ್ಮಿ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕಳೆದ 8-10 ವರ್ಷಗಳಿಂದ ಈ ಕ್ಷೌರ ವೃತ್ತಿಯನ್ನು ಮಾಡುತ್ತಿರುವ ಕೆ.ಸಿ.ಮಹದೇವ ಹಾಗೂ ಕೆ.ಸಿ.ಸಿದ್ದರಾಜು, ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಾರೆ. ಬಿಡುವಿನ ಸಮಯದಲ್ಲಿ ಊರಿನ ದಲಿತರಿಗೆ ಹೇರ್ ಕಟಿಂಗ್, ಶೇವಿಂಗ್ ಮಾಡುತ್ತಾರೆ. 

ಇವರ ಕಟಿಂಗ್ ಗೆ ಮನಸೋತ ಅನೇಕ ಯುವಕರು ಇವರು ಇರುವ ಕಡೆಗೆ ಬಂದು ಕೂದಲು ಕತ್ತರಿಸಿಕೊಳ್ಳುತ್ತಾರೆ. ಸುತ್ತ ಮುತ್ತಲಿನ ಗ್ರಾಮಗಳ ದಲಿತರಿಗೆ ಇವರೇ ಅಪತ್ಪಾಂಧವರು. ಪಕ್ಕದ ಮಾದನಹಳ್ಳಿ, ಹರದನಹಳ್ಳಿ, ತರಗನಹಳ್ಳಿ, ಕುರಿಹುಂಡಿ, ರಾಜೂರು, ಕಡಬೂರು, ನೆಲ್ಲಿತಾಳಪುರ ಸೇರಿದಂತೆ ಅನೇಕ ಗ್ರಾಮಗಳ ದಲಿತರಿಗೆ ಇವರೇ ಕಟಿಂಗ್, ಶೇವಿಂಗ್ ಮಾಡುತ್ತಾರೆ.

ದಲಿತ ಸಮುದಾಯಕ್ಕೆ ಸೇರಿದ ಈ ಇಬ್ಬರು ಸಹೋದರರು ಕೈಯಲ್ಲೊಂದು ಕತ್ತರಿ, ಟ್ರಿಮ್ಮರ್ ಮಷಿನ್ ಹಿಡಿದು ಕರೆದವರ ಮನೆಗೆ ತೆರಳಿ ಹೇರ್ ಕಟಿಂಗ್ ಮತ್ತು ಶೇವಿಂಗ್ ಮಾಡುತ್ತಾರೆ.

'ಕಪ್ಪಸೋಗೆ ಗ್ರಾಮದಲ್ಲಿ ಸುಮಾರು 2 ಸಾವಿರದಷ್ಟು ಜನಸಂಖ್ಯೆ ಇದೆ. ಇಲ್ಲಿ ನಾಯಕ, ಲಿಂಗಾಯಿತ, ಶೆಟ್ಟರು, ದಲಿತರು ಸೇರಿದಂತೆ ಇನ್ನೂ ಹಲವು ಸಮುದಾಯದವರು ವಾಸಿಸುತ್ತಿದ್ದಾರೆ. ಇಲ್ಲಿ ಹೇರ್ ಕಟಿಂಗ್ ಸೆಲೂನ್ ಇದ್ದರೂ ದಲಿತರು ಮಾತ್ರ ಅಲ್ಲಿಗೆ ತೆರಳಿ ಹೇರ್ ಕಟ್ ಮಾಡಿಸಿಕೊಳ್ಳುವುದಿಲ್ಲ, ಕಾರಣ ನಾವು ಹೋಗಿ ಕಟಿಂಗ್ ಮಾಡಿಸಿಕೊಂಡರೆ ಬೇರೆ ಸಮುದಾಯದವರು ಬರದೆ ಹೇರ್ ಕಟಿಂಗ್ ಸೆಲೂನ್ ನವರಿಗೆ ಅನ್ಯಾಯವಾಗುತ್ತದೆಯಲ್ಲಾ ಎಂದು ಅಲ್ಲಿಗೆ ತೆರಳುವುದಿಲ್ಲ' ಎಂದು ಹೆಸರು ಹೇಳಲಿಚ್ಚಿಸದ ಗ್ರಾಮಸ್ಥರೊಬ್ಬರು ತಿಳಿಸಿದರು.

'ಉಪ್ಪಿ ಬ್ರದರ್ಸ್' ಎಂದೇ ಖ್ಯಾತಿ ಪಡೆದಿರುವ ಇವರು ತಾವು ಮಾಡುತ್ತಿರುವ ವೃತ್ತಿಯನ್ನು ಬಹಳ ಪ್ರೀತಿಸುತ್ತಾರೆ. ಇವರು ಇಂತಿಷ್ಟೇ ಹಣ ಕೊಡಿ ಎಂದು ಕೇಳುವುದಿಲ್ಲ, ಇವರಿಗೆ ಹೇರ್ ಕಟಿಂಗ್ ಚೆನ್ನಾಗಿದೆ ಎಂದು ಹೇಳಿದರೆ ಅಷ್ಟೇ ಸಂತೋಷ, ಹಣ ಕೊಟ್ಟರೆ ಪಡೆಯುತ್ತಾರೆ, ಇಲ್ಲದಿದ್ದರೆ ಇಲ್ಲ.

''ವೃತ್ತಿಯಲ್ಲಿ ಹೇರ್ ಕಟಿಂಗ್ ಮಾಡುವವರಿಗೂ ಕಮ್ಮಿಯಿಲ್ಲದೆ ಬಹಳ ಚೆನ್ನಾಗಿ ಹೇರ್ ಕಟಿಂಗ್ ಮಾಡುವ ಈ ಸಹೋದರರಿಗೆ ಸ್ವಂತ ಸಲೂನ್ ಬೇಕಾಗಿದೆ. ಹಾಗಾಗಿ ಅವರಿಗೊಂದು ಬದುಕು ಕಟ್ಟಿಸಿಕೊಡುವ ಪ್ರಯತ್ನವನ್ನು ಸರ್ಕಾರ ಮತ್ತು ಸಂಬಂಧ ಪಟ್ಟ ಜನಪ್ರತಿನಿಧಿಗಳು ಮಾಡಬೇಕಿದೆ'' ಎಂದು ಸ್ಥಳೀಯ ಗ್ರಾ.ಪಂ. ಮಾಜಿ ಸದಸ್ಯ ಮಲ್ಲೇಶ್ ಒತ್ತಾಯಿಸಿದರು.

'ನಾವು ಕಟಿಂಗ್ ಮಾಡಿಸಿಕೊಳ್ಳಬೇಕು ಎಂದರೆ ಪಕ್ಕದ ಹುಲ್ಲಹಳ್ಳಿಗೆ ಹೋಗಬೇಕು, ಅಲ್ಲಿಗೆ ಎಲ್ಲರೂ ಹೋಗಿ ಕಟಿಂಗ್ ಮಾಡಿಸಿಕೊಳ್ಳಲು ಆಗುವುದಿಲ್ಲ, ನಮಗೆ ಸಮಯ ಸಿಕ್ಕಾಗ ಈ ಸಹೋದರರನ್ನು ಕರೆದು ಕಟಿಂಗ್ ಮಾಡಿಸಿಕೊಳ್ಳುತ್ತೇವೆ. ಇಬ್ಬರು ಸಹೋದರರೂ ಕಳೆದ ಹತ್ತು ವರ್ಷಗಳಿಂದ ಕಟಿಂಗ್ ಮಾಡುತ್ತಾರೆ. ಇವರಿಗೊಂದು ಅಂಗಡಿ ಇಟ್ಟುಕೊಟ್ಟರೆ ಬಹಳ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥ ಬಸವರಾಜು ಅಭಿಪ್ರಾಯಿಸುತ್ತಾರೆ.

ನಾವು ತೀರ ಬಡತನದಿಂದ ಬದುಕು ನಡೆಸುತ್ತಿದ್ದೇವೆ. ನಾನು ಜಮೀನು ಕೆಲಸದ ಜೊತೆಗೆ ಮೈಸೂರಿಗೆ ತೆರಳಿ ಎಲೆಕ್ಟ್ರಿಕ್ ಕೆಲಸವನ್ನು ಮಾಡುತ್ತಿದ್ದೇನೆ. ನಮ್ಮ ಗ್ರಾಮ ಸೇರಿದಂತೆ ಅಕ್ಕ ಪಕ್ಕದ ಗ್ರಾಮದ ದಲಿತರು ಹೇರ್ ಕಟಿಂಗ್ ಮಾಡಲು ಕರೆಯುತ್ತಾರೆ. ಹಾಗಾಗಿ ನನಗೊಂದು ಸ್ವಂತ ಹೇರ್ ಕಟಿಂಗ್ ಸೆಲೂನು ಮಾಡಿಕೊಟ್ಟರೆ ನನ್ನ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ದಲಿತರಿಗೆ ಹೇರ್ ಕಟಿಂಗ್ ಮಾಡುವ ಸಹೋದರಲ್ಲೊಬ್ಬರಾದ ಕೆ.ಸಿ.ಮಹದೇವ್ ಅವರು ತಿಳಿಸಿದರು.

ಕಪ್ಪಸೋಗೆ ಗ್ರಾಮದಲ್ಲಿ ರವಿವಾರ “ವಾರ್ತಾಭಾರತಿ” ಜೊತೆ ಮಾತನಾಡಿದ ಅವರು, 'ನಾವು ತೀರಾ ಬಡವರು, ಬದುಕು ನಡೆಸುವುದಕ್ಕಾಗಿ ಅಲ್ಲಿ ಅಲ್ಲಿ ತೆರಳಿ ಕೆಲಸ ಮಾಡುತ್ತಿದ್ದೇವೆ. ನಾನು ವಿವಾಹಿತನಾಗಿದ್ದು, ತಾಯಿ ಮತ್ತು ಸಹೋದರ ಇದ್ದಾರೆ. ನಮ್ಮ ತಂದೆ ಈ ಹಿಂದೆ ನಿಧನರಾಗಿದ್ದಾರೆ. ಜೀವನ ನಡೆಸಲು ನಾವು ಎಲೆಕ್ಟ್ರಿಕ್ ಮತ್ತು ಜಮೀನುಗಳಿಗೆ ತೆರಳಿ ಕೆಲಸ ಮಾಡುತ್ತೇವೆ ಎಂದರು.

ನಾನು ಮತ್ತು ನನ್ನ ಸಹೋದರ ಕೆ.ಸಿ.ಸಿದ್ದರಾಜು ಇಬ್ಬರೂ ಹೇರ್ ಕಟಿಂಗ್ ಮಾಡುತ್ತೇವೆ. ಹಾಗಾಗಿ ಊರಿನ ಹಿರಿಯರು, ಮಕ್ಕಳು ಸೇರಿದಂತೆ ಯುವಕರು ನಮ್ಮನ್ನು ಕರೆದು ಕಟಿಂಗ್ ಮಾಡಿಸಿಕೊಳ್ಳುತ್ತಾರೆ. ನಾನು ಇಲ್ಲದಿದ್ದರೆ ನನ್ನ ಸಹೋದರ ಕಟಿಂಗ್ ಮಾಡುತ್ತಾರೆ. ನಮಗೊಂದು ಸ್ವಂತ ಹೇರ್ ಕಟಿಂಗ್ ಶಾಪ್ ಇಟ್ಟುಕೊಟ್ಟರೆ ಇಲ್ಲೇ ಹೇರ್ ಕಟಿಂಗ್ ಮಾಡಿ ಬದುಕು ಕಟ್ಟಿಕೊಳ್ಳಬಹುದು ಎಂದು ಹೇಳಿದರು.

Writer - ನೇರಳೆ ಸತೀಶ್ ಕುಮಾರ್

contributor

Editor - ನೇರಳೆ ಸತೀಶ್ ಕುಮಾರ್

contributor

Similar News