ಜನರ ಪ್ರಾಣ ಉಳಿಸಿ, ಯಾವುದೇ ಕಾರಣಕ್ಕೂ ಲಾಕ್‍ಡೌನ್ ಬೇಡ: ವಾಟಾಳ್ ನಾಗರಾಜ್ ಏಕಾಂಗಿ ಪ್ರತಿಭಟನೆ

Update: 2021-04-18 19:03 GMT

ಮೈಸೂರು,ಎ.18: ಕೊರೋನ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಮೊದಲು ಜನರ ಪ್ರಾಣ ಉಳಿಸಿ. ಯಾವುದೇ ಕಾರಣಕ್ಕೂ ಲಾಕ್ ಡೌನ್ ಬೇಡ ಎಂದು ಕನ್ನಡ ಚಳುವಳಿ  ಹೋರಾಟಗಾರ ವಾಟಾಳ್ ನಾಗರಾಜ್ ಏಕಾಂಗಿಯಾಗಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ನಗರದ ಆರ್ ಗೇಟ್ ವೃತ್ತದಲ್ಲಿ ರವಿವಾರ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಅವರು, ಯಾವುದೇ ಕಾರಣಕ್ಕೂ ಲಾಕ್ ಡೌನ್ ಬೇಡ, ಜನರ ಪ್ರಾಣವನ್ನು ಉಳಿಸುವಂತೆ ಒತ್ತಾಯಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೋನ ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಕೊರೋನ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್‍ಗಳು ಸಿಗುತ್ತಿಲ್ಲ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೋನ ಸೋಂಕು ಬಂದಿದ್ದು, ಅವರು ಶೀಘ್ರವಾಗಿ ಗುಣಮುಖರಾಗಲಿ. ಆದರೆ ಅವರ ಸರ್ಕಾರ ಕೊರೋನ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ಕಾರಿ ಆಸ್ಪತ್ರೆ ನರಕ ಹಾಗೂ ಯಮಲೋಕ ಎಂದು ಕಿಡಿಕಾರಿದರು.

ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲ, ಆಂಬುಲೆನ್ಸ್ ಗಳು ಇಲ್ಲ, ಅಲ್ಲೊಂದು ಇಲ್ಲೊಂದು ಎನ್ನುವಂತೆ ಆಂಬುಲೆನ್ಸ್ ಓಡಾಡುತ್ತವೆ. ಕೊರೋನ ವಿಚಾರವಾಗಿ ಸರ್ಕಾರ ಸರಿಯಾದ ಭದ್ರತೆ ಮಾಡಿಲ್ಲ. ಸಚಿವ ಬೊಮ್ಮಾಯಿ, ಅಶೋಕ್, ಡಾ.ಸುಧಕಾರ್ ಮಾತ್ರ ಕಾಣಿಸುತ್ತಿದ್ದಾರೆ. ಉಳಿದ ಸಚಿವರು ಎಲ್ಲಿಗೆ ಹೋದರು ಎಂದು ಪ್ರಶ್ನಿಸಿದರು.

ಕೊರೋನ ಸಂದರ್ಭದಲ್ಲಿ ಶಾಸಕರು, ಸಂಸದರು ಒಂದೊಂದು ಭಾಗ ವಹಿಸಿಕೊಂಡು ಕೆಲಸ ಮಾಡಬೇಕು. ರಾಜ್ಯದಲ್ಲಿ ಕೋವಿಡ್? ಸಂಬಂಧಿತ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅಸಮಾಧಾನ ಹೊರ ಹಾಕಿದರು. ಮೃತದೇಹ ಸುಡೋದಕ್ಕೂ ಜಾಗವಿಲ್ಲ. ಆರೋಗ್ಯ ಸಚಿವರು ಬೇಜವಾಬ್ದಾರಿಯಿಂದ ಮಾತಾಡುತ್ತಾರೆ. ಸದ್ಯ ಲಾಕ್‍ಡೌನ್ ಬೇಡ, ಮಾಡಿದರೆ ಜನರಿಗೆ ಸಮಸ್ಯೆ ಆಗುತ್ತೆ. ಮೊದಲು ಬಾರ್, ಮಾಲ್‍ಗಳನ್ನು ಬಂದ್ ಮಾಡಿ ಎಂದು ಹೇಳಿದರು.

ವಿರೋಧ ಪಕ್ಷದವರು ಸುಮ್ಮನೆ ಕೂರೋದಲ್ಲ, ಅವರಿಗೆ ಜವಾಬ್ದಾರಿ ಹೆಚ್ಚಿದೆ. ಅವರು ಸೇರಿ ಕೊರೋನ ಓಡಿಸಲು ಪಕ್ಷಾತೀತವಾಗಿ ಬಂದಾಗಬೇಕು. ಬಡವರಿಗೆ ಸರಿಯಾದ ಸಿಗುತ್ತಿಲ್ಲ, ದುಡ್ಡಿದ್ದವರಿಗೆ ಮಾತ್ರ ಬೆಡ್ ಸಿಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News