ಸದಾನಂದಗೌಡ ಹೇಳಿಕೆ ವಿರುದ್ಧ ಕೃಷಿ ಇಲಾಖೆ ಯಾವುದೇ ಆದೇಶ ಹೊರಡಿಸಿಲ್ಲ: ಸಚಿವ ಬಿ.ಸಿ.ಪಾಟೀಲ್

Update: 2021-04-18 19:04 GMT

ಬೆಂಗಳೂರು, ಎ. 18: ಕೇಂದ್ರ ಸರಕಾರದ ಸೂಚನೆಯ ವಿರುದ್ಧ ರಾಜ್ಯ ಕೃಷಿ ಇಲಾಖೆ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಹೇಳಿರುವ ಹಳೆಯ ದಾಸ್ತಾನಿನ ರಸಗೊಬ್ಬರವನ್ನು ಹಳೆಯ ದರದಲ್ಲಿ ಮಾರಾಟ ಮಾಡಬೇಕೆಂಬ ಕೇಂದ್ರ ಸರಕಾರದ ಸೂಚನೆಗೆ ತದ್ವಿರುದ್ಧವಾಗಿ ರಾಜ್ಯ ಕೃಷಿ ಇಲಾಖೆ ಆದೇಶ ಹೊರಡಿಸಿದೆ ಎಂಬುದು ಶುದ್ಧ ಸುಳ್ಳಾಗಿದ್ದು, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡರ ಹೇಳಿಕೆ ವಿರುದ್ಧ ಯಾವುದೇ ಆದೇಶ ರಾಜ್ಯ ಕೃಷಿ ಇಲಾಖೆ ಹೊರಡಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಳೆಯ ರಸಗೊಬ್ಬರ ದಾಸ್ತಾನನ್ನು ಹಳೆಯ ದರದಲ್ಲೇ ಮಾರಾಟ ಮಾಡಬೇಕೆಂದು ರಸಗೊಬ್ಬರ ಮಾರಾಟಗಾರರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಈ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಆದರೆ, ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಸಿದ್ದರಾಮಯ್ಯ ರಾಜ್ಯದ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಡಿಎಪಿ ರಸಗೊಬ್ಬರಕ್ಕೆ ಬೇಡಿಕೆ 77,920 ಮೆ.ಟನ್ ಇದ್ದು, ಈಗಾಗಲೇ 12,5860 ಮೆ.ಟನ್ ದಾಸ್ತಾನಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಮುಂಗಾರು ಹಂಗಾಮಿನ (ಎಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ) ಕಾಂಪ್ಲೆಕ್ಸ್ ರಸಗೊಬ್ಬರಗಳ ಒಟ್ಟು ಬೇಡಿಕೆ 10.03 ಲಕ್ಷ ಮೆ.ಟನ್ ಇದ್ದು ಎಪ್ರಿಲ್ ತಿಂಗಳ ಬೇಡಿಕೆ 1.68 ಲಕ್ಷ ಮೆ.ಟನ್ ಇರುತ್ತದೆ. ಈಗಾಗಲೇ 5.19ಲಕ್ಷ ಮೆ.ಟನ್ ದಾಸ್ತಾನಿರುತ್ತದೆ. ರಸಗೊಬ್ಬರ ಮಾರಾಟಗಾರರು ಯಾವುದೇ ಕಾರಣಕ್ಕೂ ದಾಸ್ತಾನು ಇರುವ ಹಳೆಯ ರಸಗೊಬ್ಬರವನ್ನು ಹೊಸದರದಲ್ಲಿ ವಿತರಿಸದೇ ಹಳೆಯ ದಾಸ್ತಾನನ್ನು ಹಳೆಯ ದರದಲ್ಲಿಯೇ ಮಾರಾಟ ಮಾಡಬೇಕೆಂದು ಸಚಿವ ಬಿ.ಸಿ.ಪಾಟೀಲ್ ಪ್ರಕಟಣೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News